ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸಲೆ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ತೀವ್ರ ಸುಸ್ತು ಮತ್ತು ಎದೆಯ ಸೋಂಕಿನಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಮಗ ಆನಂದ್ ಭೋಸಲೆ ಮತ್ತು ಮೊಮ್ಮಗಳು ಜನೈ ಭೋಸಲೆ ಅಧಿಕೃತವಾಗಿ ತಿಳಿಸಿದ್ದಾರೆ. ಈ ಸುದ್ದಿಯಿಂದ ಇಡೀ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಆಶಾ ಭೋಸಲೆ ಅವರು ಕೇವಲ ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಐತಿಹಾಸಿಕ ಚಿತ್ರ ‘ಸಂಗೊಳ್ಳಿ ರಾಯಣ್ಣ’ (1967) ಸೇರಿದಂತೆ ಅನೇಕ ಸಿನಿಮಾಗಳಿಗೆ ಅವರು ದನಿಯಾಗಿದ್ದರು. ತಮ್ಮ ವಿಶಿಷ್ಟ ಧ್ವನಿ ಮತ್ತು ವೈವಿಧ್ಯಮಯ ಹಾಡುಗಳ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದ ಅವರು, ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ನಿಧನದೊಂದಿಗೆ ಭಾರತೀಯ ಸಂಗೀತದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ. ಸೋಮವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ

