ಬೆಳಗಾವಿಯ ಕಣಬರ್ಗಿಯಲ್ಲಿ ಪ್ರಾಣಿ ಪ್ರೇಮದ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಮನೆಯ ಮಹಡಿಯ ಮೇಲೆ ಮೃತಪಟ್ಟಿದ್ದ ಮಂಗವೊಂದಕ್ಕೆ ಮಾಜಿ ಕಾರ್ಪೊರೇಟರ್ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಣಬರ್ಗಿಯ ಜ್ಯೋತಿರ್ಲಿಂಗ ಗಲ್ಲಿಯ 2ನೇ ಅಡ್ಡರಸ್ತೆಯ ಮನೆಯೊಂದರ ಮಹಡಿಯ ಮೇಲೆ ಇಂದು ಮಂಗವೊಂದು ಮೃತಪಟ್ಟಿತ್ತು. ತಕ್ಷಣವೇ ಎಚ್ಚೆತ್ತ ಮನೆಯ ಮಾಲೀಕರು ಮಾಜಿ ಕಾರ್ಪೊರೇಟರ್ ಆದ ಭೈರಗೌಡ ಪಾಟೀಲ್ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಭೈರಗೌಡ ಪಾಟೀಲ್ ಮತ್ತು ಮಹಾನಗರ ಪಾಲಿಕೆಯ ಸದಸ್ಯರು, ಮೃತ ದೇಹವನ್ನು ಅತ್ಯಂತ ಭಕ್ತಿಯಿಂದ ಕಣಬರ್ಗಿ ಬಸ್ ನಿಲ್ದಾಣದವರೆಗೆ ಹೊತ್ತು ತಂದರು. ಅಲ್ಲಿ ಮಂಗನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಬಸ್ ನಿಲ್ದಾಣದಿಂದ ಶ್ರೀ ಸಿದ್ಧೇಶ್ವರ ಮಂದಿರದವರೆಗೆ ಅಂತಿಮ ಯಾತ್ರೆಯನ್ನು ನೆರವೇರಿಸಿ, ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಪೂರೈಸುವ ಮೂಲಕ ಪ್ರಾಣಿ ಸಂಕುಲದ ಬಗ್ಗೆ ತಮಗಿರುವ ಕಾಳಜಿಯನ್ನು ಪ್ರದರ್ಶಿಸಿದರು.
