ಬೆಳಗಾವಿಯ ಜಗತ್ಪ್ರಸಿದ್ಧ ಶಿವಜಯಂತಿ ಮೆರವಣಿಗೆಯನ್ನು ಈ ಬಾರಿ ಅತ್ಯಂತ ಶಿಸ್ತುಬದ್ಧ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಪೊಲೀಸ್ ಇಲಾಖೆ ಮತ್ತು ಮಂಡಳಿಗಳು ಸಜ್ಜಾಗಿವೆ. ಮೆರವಣಿಗೆಯಲ್ಲಿ ಡಿಜೆ ಅಬ್ಬರಕ್ಕೆ ಬ್ರೇಕ್ ಹಾಕಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕೆಂಗಣ್ಣು ಬೀರಲು ಸಿದ್ಧತೆ ನಡೆದಿದೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಮೆರವಣಿಗೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಮೆರವಣಿಗೆಯಲ್ಲಿ ಐತಿಹಾಸಿಕ ಚಿತ್ರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಡಿಜೆ ಬಳಸಿ ಅಶ್ಲೀಲ ನೃತ್ಯ ಮಾಡುವ ಮತ್ತು ಇತರ ಮಂಡಳಿಗಳಿಗೆ ಅಡ್ಡಿಪಡಿಸುವವರಿಗೆ ಮುಖ್ಯ ಮೆರವಣಿಗೆಯಲ್ಲಿ ಪ್ರವೇಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಿತಿಮೀರಿದ ಸೌಂಡ್ ಸಿಸ್ಟಮ್ ಜಪ್ತಿ ಮಾಡಲಾಗುವುದು ಮತ್ತು ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಮಂಡಳಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಈ ವೇಳೆ ಶಿವಜಯಂತಿ ಚಿತ್ರರಥ ಮಹಾಮಂಡಳದ ಅಧ್ಯಕ್ಷ ಸುನಿಲ್ ಜಾಧವ್ ಅವರ ಬೇಡಿಕೆಯಂತೆ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಒಳಗೊಂಡ ಏಕಗವಾಕ್ಷಿ ‘ಸಹಾಯ ಕೇಂದ್ರ’ ಸ್ಥಾಪಿಸಲು ಆಯುಕ್ತರು ಒಪ್ಪಿಗೆ ನೀಡಿದರು.
ಉಪ ಆಯುಕ್ತರಾದ ನಾರಾಯಣ ಬರಮಣಿ ಅವರು ಮಾತನಾಡಿ, ಹೊರಗಿನಿಂದ ಬಂದ ಪೊಲೀಸ್ ಸಿಬ್ಬಂದಿಗೆ ಗೌರವ ನೀಡುವಂತೆ ಹಾಗೂ ನಿಗದಿಪಡಿಸಿದ ಸಮಯದೊಳಗೆ ಮೆರವಣಿಗೆ ಮುಗಿಸಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಸಹಕರಿಸಲು ವಿನಂತಿಸಿದರು. ಯಾವುದೇ ರಾಜಕೀಯ ಅಥವಾ ಸಾಮಾಜಿಕ ವಿವಾದಕ್ಕೆ ಆಸ್ಪದ ನೀಡದೆ ಒಗ್ಗಟ್ಟಿನಿಂದ ಶಿವಜಯಂತಿ ಆಚರಿಸುವುದಾಗಿ ರಮಾಕಾಂತ್ ಕೊಂಡುಸ್ಕರ್ ಮತ್ತು ರಣಜಿತ್ ಚೌಹಾಣ್ ಪಾಟೀಲ್ ಅವರು ಭರವಸೆ ನೀಡಿದರು. ಈ ಮಹತ್ವದ ಸಭೆಯಲ್ಲಿ ಪ್ರಕಾಶ್ ಮರಗಾಳೆ, ಮಧ್ಯವರ್ತಿ ಸಾರ್ವಜನಿಕ ಶಿವಜಯಂತಿ ಉತ್ಸವ ಮಂಡಳಿಯ ಪದಾಧಿಕಾರಿಗಳು ಹಾಗೂ ನೂರಾರು ಶಿವಸೈನಿಕರು ಪಾಲ್ಗೊಂಡು ಈ ಬಾರಿಯ ಉತ್ಸವವನ್ನು ಯಶಸ್ವಿಗೊಳಿಸುವ ಶಪಥ ಮಾಡಿದರು.
