ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಬಟ್ಟಿ ಅಡ್ಡೆಯ ಮೇಲೆ ನಂದಗಡ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಈ ಮೂಲಕ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದ ಸುತ್ತಮುತ್ತಲಿನ ಹಳ್ಳಿಗಳ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಭೀಮಪ್ಪ ಯಲ್ಲಪ್ಪ ದಳವಾಯಿ ಎಂಬಾತ ಕಲ್ಲಪ್ಪ ಮೀಟಗಾರ ಎಂಬುವವರ ಜಮೀನಿನ ಹತ್ತಿರದ ಹಳ್ಳದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದನು. ಇದರಿಂದಾಗಿ ಚಿಕ್ಕಮುನವಳ್ಳಿ ಹಾಗೂ ಹಿರೇಮುನವಳ್ಳಿ ಗ್ರಾಮದ ಯುವಕರು ಮತ್ತು ಸಾರ್ವಜನಿಕರು ಕುಡಿತಕ್ಕೆ ಬಲಿಯಾಗಿ ಗ್ರಾಮದ ಶಾಂತಿ ಸೌಹಾರ್ದತೆ ಕೆಡುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ನಂದಗಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ನಂದಗಡ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಅವರ ನೇತೃತ್ವದಲ್ಲಿ, ಬಿಟ್ ಹವಾಲ್ದಾರ್ ನೀಲಕಂಠ ಚಂದರಗಿ ಮತ್ತು ವಿಜಯ ಪಾಟೀಲ ಅವರು ಮಾಹಿತಿ ಕಲೆಹಾಕಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳಬಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ಭೀಮಪ್ಪ ದಳವಾಯಿಯನ್ನು ಹಿಡಿದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಈ ಸಮಯೋಚಿತ ಕ್ರಮಕ್ಕೆ ಹಿರೇಮುನವಳ್ಳಿ ಹಾಗೂ ಚಿಕ್ಕಮುನವಳ್ಳಿ ಗ್ರಾಮದ ಮಹಿಳೆಯರು ಮತ್ತು ಹಿರಿಯರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
