ಶುಭ ಶುಕ್ರವಾರದ ಮುನ್ನಾದಿನವಾದ ನಿನ್ನೆ ಬೆಳಗಾವಿಯಾದ್ಯಂತ ಕ್ರೈಸ್ತ ಬಾಂಧವರು ಭಕ್ತಿಭಾವದಿಂದ ‘ಮೌಂಡಿ ಗುರುವಾರ’ವನ್ನು ಆಚರಿಸಿದರು. ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಸೇವಾ ಮನೋಭಾವದ ಸಂದೇಶ ನೀಡಿದ ಸ್ಮರಣಾರ್ಥವಾಗಿ ನಗರದ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳು ಜರುಗಿದವು.
ಬೆಳಗಾವಿಯ ಕ್ಯಾಂಪ್ ಪ್ರದೇಶದ ‘ಅವರ್ ಲೇಡಿ ಆಫ್ ಫಾತಿಮಾ ಕ್ಯಾಥೆಡ್ರಲ್’ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಬಿಷಪ್ ಡೆರೆಕ್ ಫರ್ನಾಂಡಿಸ್ ಅವರು ಮೌಂಡಿ ಗುರುವಾರದ ಮಹತ್ವದ ಕುರಿತು ಪ್ರಬೋಧನೆ ನೀಡಿದರು. ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಜಗತ್ತಿಗೆ ನಮ್ರತೆ ಮತ್ತು ಸೇವೆಯ ಪರಮೋಚ್ಚ ಪಾಠವನ್ನು ಕಲಿಸಿದ್ದಾರೆ. ಶಿಷ್ಯತ್ವ ಎಂಬುದು ದೇವರು ನಮಗೆ ಸೇವೆ ಮಾಡಲು ಮತ್ತು ನಮ್ಮನ್ನು ಶುದ್ಧೀಕರಿಸಲು ಅವಕಾಶ ನೀಡುವುದರಿಂದ ಆರಂಭವಾಗುತ್ತದೆ ಎಂದು ಬಿಷಪ್ ಡೇರಿಕ್ ಫರ್ನಾಂಡೀಸ್ ಈ ಸಂದರ್ಭದಲ್ಲಿ ತಿಳಿಸಿದರು. ನಗರದ ಮತ್ತು ಸುತ್ತಮುತ್ತಲಿನ ಎಲ್ಲಾ ಚರ್ಚ್‌ಗಳಲ್ಲಿ ಧರ್ಮಗುರುಗಳು 12 ಜನರ ಪಾದಗಳನ್ನು ತೊಳೆಯುವ ಮೂಲಕ ಬೈಬಲ್‌ನಲ್ಲಿ ಉಲ್ಲೇಖಿಸಲಾದ ಐತಿಹಾಸಿಕ ಘಟನೆಯನ್ನು ಪುನರಾವರ್ತಿಸಿದರು. ಈ ಪಾದ ತೊಳೆಯುವ ಆಚರಣೆಯು ಕೇವಲ ಸಂಪ್ರದಾಯವಲ್ಲ, ಬದಲಾಗಿ ಇದು ಆಂತರಿಕ ಶುದ್ಧೀಕರಣ ಮತ್ತು ಆಧ್ಯಾತ್ಮಿಕ ನವೀಕರಣದ ಸಂಕೇತವಾಗಿದೆ. ಅನೇಕರು ಇತರರಿಗೆ ಸೇವೆ ಮಾಡಲು ಸಿದ್ಧರಿದ್ದರೂ, ತಮ್ಮಲ್ಲಿನ ದೌರ್ಬಲ್ಯಗಳನ್ನು ಒಪ್ಪಿಕೊಂಡು ದೇವರ ಕೃಪೆಯನ್ನು ಪಡೆಯಲು ಹಿಂಜರಿಯುತ್ತಾರೆ ಎಂದು ಬಿಷಪ್ ಡೇರಿಕ್ ಫರ್ನಾಂಡಿಸ್ ಅವರು ಅಭಿಪ್ರಾಯಪಟ್ಟರು.
ವಿವಿಧ ಪಂಗಡಗಳ ಕ್ರೈಸ್ತ ಬಾಂಧವರು ಈ ಪವಿತ್ರ ಪ್ರಾರ್ಥನಾ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಯೇಸು ಕ್ರಿಸ್ತರು ಭಕ್ತರಿಗೆ ನೀಡಿದ ದಿವ್ಯ ಭೋಜನದ ಸ್ಮರಣೆಯೊಂದಿಗೆ, ಸಮಾಜದಲ್ಲಿ ನಿಸ್ವಾರ್ಥ ಸೇವೆ, ಕರುಣೆ ಮತ್ತು ಕ್ಷಮಾಗುಣವನ್ನು ಬೆಳೆಸಿಕೊಳ್ಳಲು ಕರೆ ನೀಡಲಾಯಿತು. ಶುಭ ಶುಕ್ರವಾರದ ಪೂರ್ವಭಾವಿಯಾಗಿ ತಡರಾತ್ರಿಯವರೆಗೆ ವಿಶೇಷ ಪ್ರಾರ್ಥನೆಗಳು ನಡೆದವು, ಇದು ವಿಶ್ವಾಸಿಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬಿತು.
