BELAGAVI

ಬೆಳಗಾವಿಯಲ್ಲಿ ಭರ್ಜರಿ ಬೇಟೆ: 15 ಕೋಟಿ ವಂಚಿಸಿದ್ದ ಇಬ್ಬರು ‘ಡಿಜಿಟಲ್ ಅರೆಸ್ಟ್’ ಖದೀಮರ ಬಂಧನ

Share

ಬೆಳಗಾವಿ ಉದ್ಯಮಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 15 ಕೋಟಿ ರೂಪಾಯಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸೈಬರ್ ಕ್ರೈಂ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ಸಿಬಿಐ ಕೈ ಸೇರುವ ಮುನ್ನವೇ ಇಬ್ಬರು ಅಂತರರಾಜ್ಯ ವಂಚಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ನಗರದ ಉದ್ಯಮಿಯೊಬ್ಬರಿಗೆ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿ ‘ಡಿಜಿಟಲ್ ಅರೆಸ್ಟ್’ ಮಾಡಿ 15 ಕೋಟಿ 45 ಲಕ್ಷ ರೂಪಾಯಿ ದೋಚಿದ್ದ ಖದೀಮರ ಜಾಲವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. ಹೈದರಾಬಾದ್ ಮೂಲದ ಶ್ರೀಪಾದ ನಾಯಿಕ್ ಮತ್ತು ಶರದ್ ನಾಯಿಕ್ ಬಂಧಿತ ಆರೋಪಿಗಳು. ವಂಚಕರು ಉದ್ಯಮಿಯ ಖಾತೆಯಿಂದ ದೇಶದ ವಿವಿಧ 6 ರಾಜ್ಯಗಳ 10 ಪ್ರಮುಖ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಈ ಹಣವನ್ನು ಬಳಿಕ ಸುಮಾರು 390ಕ್ಕೂ ಹೆಚ್ಚು ಉಪ ಖಾತೆಗಳ ಮೂಲಕ ವಿತ್‌ಡ್ರಾ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಕಲಿ ಕಂಪನಿಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗೆ 2 ಕೋಟಿ ರೂಪಾಯಿ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಅದರಲ್ಲಿ ಈಗಾಗಲೇ 1 ಕೋಟಿ ರೂಪಾಯಿಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಹೈದರಾಬಾದ್, ಅಹಮದಾಬಾದ್, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಖಾತೆಗಳನ್ನು ವಂಚನೆಗೆ ಬಳಸಿಕೊಳ್ಳಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಇದು ಸಿಬಿಐಗೆ ಹಸ್ತಾಂತರವಾಗಲಿದ್ದು, ಈ ಜಾಲದಲ್ಲಿರುವ ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ತಿಳಿಸಿದ್ದಾರೆ.

Tags:

error: Content is protected !!