hubbali

ಮಾರುಕಟ್ಟೆಯೋ ಅಥವಾ ಕಸದ ರಾಶಿಯೋ? ಹುಬ್ಬಳ್ಳಿಯ ಗಣೇಶ್‌ಪೇಟೆ ಮಾರುಕಟ್ಟೆಯಲ್ಲಿ ಅಸ್ವಚ್ಛತೆಯ ತಾಂಡವ!

Share

ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಗಣೇಶ್‌ಪೇಟೆ ಮಾರುಕಟ್ಟೆ ಈಗ ಅಸ್ವಚ್ಛತೆಯ ಆಗರವಾಗಿದೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಮಾರುಕಟ್ಟೆಯ ಪ್ರವೇಶದ್ವಾರವೇ ತಿಪ್ಪೆಯಾಗಿ ಮಾರ್ಪಟ್ಟಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ನರಕಯಾತನೆ ಅನುಭವಿಸುತ್ತಿದ್ದಾರೆ.

ಹುಬ್ಬಳ್ಳಿಯ ಗಣೇಶ್‌ಪೇಟೆ ಮಾರುಕಟ್ಟೆಯಲ್ಲಿ ಗಣೇಶ ಮಂದಿರದ ಕೂಗಳತೆಯ ದೂರದಲ್ಲೇ ಕಸದ ರಾಶಿ ನಿರ್ಮಾಣಗೊಂಡಿದೆ. ಪ್ರತಿನಿತ್ಯ ನೂರಾರು ಜನ ಬಂದು ಹೋಗುವ ಈ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ವ್ಯಾಪಾರಿಗಳು ಅನಿವಾರ್ಯವಾಗಿ ಕಸದ ರಾಶಿಯ ಎದುರೇ ಕುಳಿತು ವ್ಯಾಪಾರ ಮಾಡುವಂತಾಗಿದ್ದು, ಇಡೀ ಮಾರುಕಟ್ಟೆ ಪ್ರದೇಶ ದುರ್ನಾತದಿಂದ ತುಂಬಿಹೋಗಿದೆ.

ಸ್ಥಳೀಯ ವ್ಯಾಪಾರಿಗಳು ಹತ್ತಾರು ಬಾರಿ ಪಾಲಿಕೆ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಮಾರುಕಟ್ಟೆಯ ಅಸ್ವಚ್ಛತೆಯು ಹುಬ್ಬಳ್ಳಿಯ ಅಂದಕ್ಕೆ ಕಪ್ಪುಚುಕ್ಕೆಯಾಗಿದ್ದು, ಜನರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ನರಕಕ್ಕೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!