ಬೆಳಗಾವಿಯ ಶಿವಬಸವನಗರದ ಪವಿತ್ರ ಕ್ಷೇತ್ರ ಶ್ರೀ ಜೋತಿಬಾ ಮಂದಿರದಲ್ಲಿ ಇಂದು ಚೈತ್ರ ಪೌರ್ಣಿಮೆ ಯಾತ್ರೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗುತ್ತಿದೆ. ಬೆಳಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ದಖನ್ ರಾಜನ ದರ್ಶನಕ್ಕೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.

ಚೈತ್ರ ಪೌರ್ಣಿಮೆಯ ಈ ಶುಭ ದಿನದಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಜೋತಿಬಾ ದೇವರಿಗೆ ಪವಿತ್ರ ಅಭಿಷೇಕ, ಪಾದಪೂಜೆ ಹಾಗೂ ಆಕರ್ಷಕ ಅಲಂಕಾರ ಪೂಜೆಯನ್ನು ನೆರವೇರಿಸಲಾಯಿತು. ಕೊಲ್ಲಾಪುರದ ಯಾತ್ರೆಗೆ ಹೋಗಲಾಗದ ಸಾವಿರಾರು ಭಕ್ತರು ಬೆಳಗಾವಿಯ ಈ ಮಂದಿರಕ್ಕೆ ಭೇಟಿ ನೀಡಿ ಪುನೀತರಾಗುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಗೆ ದೀಪಪ್ರಜ್ವಲನೆಯೊಂದಿಗೆ ಭವ್ಯ ಮಹಾಆರತಿ ನಡೆಯಲಿದ್ದು, ಮಂದಿರದ ಆವರಣ ಆಧ್ಯಾತ್ಮಿಕ ಚೈತನ್ಯದಿಂದ ತುಂಬಿ ತುಳುಕುತ್ತಿದೆ. ದೇವಸ್ಥಾನ ಸಮಿತಿಯು ಭಕ್ತರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದ್ದು, ಭಕ್ತಿಪರವಶತೆಯ ವಾತಾವರಣ ನಿರ್ಮಾಣವಾಗಿದೆ.

ಉತ್ಸವದ ಅಂಗವಾಗಿ ಬೆಳಗಾವಿಯ ಅತ್ಯಂತ ಗೌರವದ ‘ದೇವದಾದಾ’ ಸಾಸನಕಾಠಿಯು ಕೊಲ್ಲಾಪುರಕ್ಕೆ ತೆರಳಿದ್ದು, ಏಪ್ರಿಲ್ 6ರ ಸೋಮವಾರದಂದು ಮರಳಿ ಶಿವಬಸವನಗರಕ್ಕೆ ಆಗಮಿಸಲಿದೆ ಎಂದು ಮಂದಿರ ಸಮಿತಿಯ ಅಡ್ವೊಕೇಟ್ ಅಮರ್ ಯಳ್ಳೂರಕರ್ ತಿಳಿಸಿದ್ದಾರೆ. ಸಾಸನಕಾಠಿ ಆಗಮನದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಭಕ್ತರಿಗಾಗಿ ಬೃಹತ್ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಪವಿತ್ರ ಪಲ್ಲಕ್ಕಿ ದರ್ಶನ ಹಾಗೂ ಪ್ರಸಾದ ಸೇವನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮಂದಿರ ವ್ಯವಸ್ಥಾಪನಾ ಸಮಿತಿಯ ಅಮರ್ ಯಳ್ಳೂರ ಅವರು ಇನ್ ನ್ಯೂಸ್’ಗೆ ತಿಳಿಸಿದರು.
