ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಅತಿ ದೊಡ್ಡ ಪಟ್ಟಣವಾದ ಉಗಾರ್ ಖುರ್ದ್ನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಲು ಯುವಶಕ್ತಿ ಸಜ್ಜಾಗಿದೆ. ಜನಸಾಮಾನ್ಯರ ಮೂಲಭೂತ ಸೌಕರ್ಯಗಳಿಗಾಗಿ ಹೋರಾಡಲು ಸ್ಥಾಪಿತವಾಗಿರುವ ‘ಜನಶಕ್ತಿ ಸೇವಾ ಸಂಘ’ದ ಉದ್ಘಾಟನಾ ಸಮಾರಂಭವು ನಾಳೆ ಸಂಜೆ ನೆರವೇರಲಿದೆ ಎಂದು ನ್ಯಾಯಾವಾದಿ ರಾಹುಲ್ ಕಟಗೇರಿ ತಿಳಿಸಿದ್ದಾರೆ.

ಕಾಗವಾಡ ತಾಲೂಕಿನ ಸುಮಾರು 26 ಸಾವಿರ ಜನಸಂಖ್ಯೆ ಹೊಂದಿರುವ ಉಗಾರ್ ಖುರ್ದ್ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ಅಸ್ವಚ್ಛತೆಯಂತಹ ಗಂಭೀರ ಸಮಸ್ಯೆಗಳು ತಾಂಡವವಾಡುತ್ತಿವೆ. ಕೃಷ್ಣಾ ನದಿಯ ತೀರದಲ್ಲಿದ್ದರೂ ಪಟ್ಟಣದ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಈ ಎಲ್ಲ ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸಿ, ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಸ್ಥಳೀಯ ಯುವಕರು ನ್ಯಾಯವಾದಿ ರಾಹುಲ್ ಕಟಗೇರಿ ಅವರ ನೇತೃತ್ವದಲ್ಲಿ ‘ಜನಶಕ್ತಿ ಸೇವಾ ಸಂಘ’ವನ್ನು ಸ್ಥಾಪಿಸಿದ್ದಾರೆ.
ಈ ನೂತನ ಸಂಘದ ಉದ್ಘಾಟನಾ ಸಮಾರಂಭವು ರವಿವಾರ ದಿನಾಂಕ 19ರಂದು ಸಂಜೆ ಅದ್ದೂರಿಯಾಗಿ ಜರುಗಲಿದೆ. ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದನ್ ಶಿರಗಾಂವಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ, ಪಿ.ಎಸ್.ಐ ರಾಘವೇಂದ್ರ ಖೋತ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಸಂಘದ ನೂತನ ಅಧ್ಯಕ್ಷರಾದ ರಾಜು ಎಸವಾಡಿ, ಉಪಾಧ್ಯಕ್ಷ ಭಾವನ ಮಲಿಕ್ ಜಮ್ಖಾನೆ ಹಾಗೂ ಕಾರ್ಯದರ್ಶಿ ಅರುಣ್ ಮುಲ್ಲಾ ಅವರನ್ನೊಳಗೊಂಡ ಯುವ ತಂಡವು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿರುವುದಾಗಿ ಘೋಷಿಸಿದೆ.
