: ಡಾ. ಬಾಬು ಜಗಜೀವನ ರಾಂ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ, ಕೃಷಿ ಪದ್ಧತಿಗಳಲ್ಲಿ ಅಧುನಿಕತೆಯನ್ನು ಬಳಸಿ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಿ ದೇಶದ ಆಹಾರ ಭದ್ರತೆಗೆ ನಾಂದಿ ಹಾಡಿದ ಮಹಾನ್ ಚಿಂತಕರು ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿದ್ದರು ಎಂದು ನಾಗಠಾಣ ಮೀಸಲು ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು. ಜಿಲ್ಲಾಡಳಿತ,

ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಕೆ ಸಹಯೋಗದಲ್ಲಿ ವಿಜಯಪುರ ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಇಂತಹ ಮಹನೀಯರನ್ನು ನಾವು ಪ್ರತಿನಿತ್ಯ ನೆನೆಪಿಸಿಕೊಳ್ಳಬೇಕು. ಅಂದಾಗ ಅವರ ಚಿಂತನೆಗಳು ಸಾಕಾರಗೊಳ್ಳುತ್ತವೆ. ಶೋಷಿತರ ಸಮಸ್ಯೆಗಳ, ಅನ್ಯಾಯಗಳ ವಿರುದ್ಧ ಹಾಗೂ ಸಮ ಸಮಾಜಕ್ಕಾಗಿ ಹೋರಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ಅವರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದರು. ಡಾ. ಬಾಬು ಜಗಜೀವನ ರಾಂ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿಗೆ ಕಾರಣೀಕರ್ತರಾದರು ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ. ಆನಂದ.ಕೆ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ
ಡಾ.ಬಾಬು ಜಗಜೀವನರಾಂ ಅವರ ಬದುಕೇ ಆದರ್ಶವಾಗಿದೆ ಎಂದರು. ಹಿಂದೆ ನಮ್ಮ ದೇಶಕ್ಕೆ ಆಹಾರ ಭದ್ರತೆ ಇರಲಿಲ್ಲ. ಅಂತಹ ಸಮಯದಲ್ಲಿ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ಸಮಸ್ಯೆ ಎದುರಾಗಿತ್ತು. ಆಗ ಡಾ. ಬಾಬು ಜಗಜೀವನರಾಂ ಅವರು ದೇಶಕ್ಕೆ ಆಹಾರ ಭದ್ರತೆಗೆ ಅಡಿಪಾಯ ಹಾಕಿದರು. ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಿದ್ದರೂ, ಅವುಗಳಿಗೆ ಬೆಂಬಲ ಬೆಲೆ ನೀಡುವುದರ ಮೂಲಕ ದೇಶವನ್ನು ಗಂಡಾಂತರದಿಂದ ಪಾರು ಮಾಡಿದ ಹೆಮ್ಮೆಯ ನಾಯಕರೆನಿಸಿಕೊಂಡ ಮಹಾನ್ ನಾಯಕ ಎಂದು ಬಣ್ಣಿಸಿದರು. ಕಷ್ಟ ಕೋಟಲೆಯಲ್ಲಿ ಡಾ. ಬಾಬು ಜಗಜೀವನರಾಂ ಅವರು ರಾಷ್ಟ್ರವನ್ನು ಮುನ್ನಡೆಸಿದ ಮುತ್ಸದ್ಧಿ. ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರುವುದರ ಮೂಲಕ ಪ್ರತಿಯೊಬ್ಬರಿಗೂ ಗೌರವ, ಸಮಾನತೆ ತಂದು ಕೊಟ್ಟ ಮಹಾನ್ ದಾರ್ಶನಿಕರು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ಪ್ರೊ. ಲಕ್ಷ್ಮೀದೇವಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಸಮಾಜ ಮುಖಂಡರಾದ ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ ,ಶ್ರೀನಿವಾಸ ಶಹಾಪೂರ, ಪರಶುರಾಮ ರೋಣಿಹಾಳ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಇದ್ದರು
