BELAGAVI

ಸನಾತನ ಪರಂಪರೆಯ ಭಾರತ ಅಧ್ಯಾತ್ಮದ ತವರೂರು

Share

ಭಾರತತ ದೇಶದಲ್ಲಿ ಸಂಸ್ಕೃತಿ, ಆಚಾರ-ವಿಚಾರ, ಸನಾತನ ಪರಂಪರೆ ಬಹಳ ವ್ಯಾಪಕವಾಗಿ ಹರಡಿಕೊಂಡಿದ್ದು, ಹೀಗಾಗಿ ಭಾರತ ಅಧ್ಯಾತ್ಮದ ತವರೂರು ಎಂದು ಹೊನ್ನಿಹಾಳದ ಶ್ರೀ ಬಸವರಾಜ ದೇವರು ಹೇಳಿದರು.

ತಾಲೂಕಿನ ಸುಳೇಭಾವಿ ಗ್ರಾಮದ ಬಜಾರ ಗಲ್ಲಿಯಲ್ಲಿ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ 112ನೇ ಜಯಂತ್ಯುತ್ಸವ ನಿಮಿತ್ತ ಆಧ್ಯಾತ್ಮಿಕ ಪ್ರವಚನ ನೀಡಿದರು.

ಭಾರತ ದೇಶದಲ್ಲಿ ಧರ್ಮ ಜಾಗೃತಿ ನಡೆಯುತ್ತಿದೆ. ಧರ್ಮದ ತವರೂರು ಆಗಿರುವುದರಿಂದ ಈ ದೇಶವನ್ನು ವಿದೇಶಿಗರೂ ಅಪ್ಪಿಕೊಳ್ಳುತ್ತಿದ್ದಾರೆ. ದೇಶದ ಮೇಲೆ ಅಪಾರ ಭಕ್ತಿ ಇಟ್ಟುಕೊಂಡು ಹಲವು ಈ ಸನಾತನ ಸಂಸ್ಕೃತಿಯನ್ನು ಗೌರವಿಸುತ್ತಿದ್ದಾರೆ. ಜಗತ್ತಿನಲ್ಲಿ ಶ್ರೇಷ್ಠ ಹಾಗೂ ಖ್ಯಾತಿ ಗಳಿಸಿರುವ ಹಿಂದೂ ಧರ್ಮ ವ್ಯಾಪಕವಾಗಿ ಹರಡಿಕೊಂಡಿದೆ ಎಂದು ಹೇಳಿದರು.

ಭವದಿಂದ ಮುಕ್ತರಾಗಲು ಶರಣರ, ಸಂತರ ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರೂ ಅಧ್ಯಾತ್ಮ ಜೀವಿಗಳಾಗಿ ಬದುಕಬೇಕು. ಮನುಷ್ಯ ಜೀವನ ಎಂಬುದು ಅತ್ಯಂತ ಶ್ರೇಷ್ಠವಾಗಿದೆ. ಸಂಸಾರ ಎಂಬ ಬಂಧನದಲ್ಲಿ ಸಿಲುಕಿ ಅಧ್ಯಾತ್ಮವನ್ನು ಮರೆಯಬಾರದು. ಸಾಧು-ಸಂತರ ವಿಚಾರಗಳು, ತತ್ವಗಳು ಜೀವನಕ್ಕೆ ಪಾಠ ಕಲಿಸುತ್ತವೆ. ಭಕ್ತಿ ಮೂಲಕ ನಾವು ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಸಾಧ್ಯವಿದೆ. ಭಕ್ತ-ಶ್ರದ್ಧೆಯನ್ನು ಇಟ್ಟುಕೊಂಡು ಭಗವಂತನನ್ನು ಒಲಿಸಿಕೊಳ್ಳಬೇಕು. ಅಧ್ಯಾತ್ಮವೇ ನಮ್ಮ ಜೀವಾಳ ಎಂಬುದನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಆಂಧ್ರಪ್ರದೇಶದ ಕಲ್ಮಠ ಅದೋನಿಯ ಶ್ರೀ ಗುರುಸಿದ್ಧ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಮೊದಲು ಮನುಷ್ಯನಾಗಿ ಬದುಕಬೇಕು. ಹಂಚಿಕೊಂಡು ತಿನ್ನುವ ಸ್ವಭಾವ ಇರಬೇಕು. ಧರ್ಮ ಕಾರ್ಯದ ಮೂಲಕ ಜೀವನ ನಡೆಸಬೇಕು. ಮನಚುಷ್ಯ ಜೀವನ ಎಂದರೆ ಭಗವಂತನಲ್ಲಿ ಸೇರುವುದು ಎಂದರ್ಥ. ಆಧ್ಯಾತ್ಮಿಕತೆ ಮೂಲಕ ಮನುಷ್ಯ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ವೇ.ಮೂ. ಶ್ರೀ ಶ್ರೀಶೈಲ ಶಾಸ್ತ್ರಿಗಳು ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಭಗವಂತನ ನಿತ್ಯ ನಾಮಸ್ಮರಣೆ ಬಹಳ ಮುಖ್ಯವಾಗಿದೆ. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಮುಂದೆ ಸಾಗಿದರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಭಗವಂತನ ಕೃಪೆ ಇದ್ದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯವಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕಾರ, ಆಚಾರ-ವಿಚಾರಗಳನ್ನು ಬಿತ್ತಲು ಸಾಧ್ಯವಿದೆ ಎಂದು ಹೇಳಿದರು.

ವೇ.ಮೂ. ಶ್ರೀ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ಸಮಾಜವನ್ನು ಉತ್ತಮಗೊಳಿಸಲು ಆಧ್ಯಾತ್ಮಿಕ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಇಂಥ ಕಾರ್ಯಕ್ರಮಗಳನ್ನು ಜನರ ಸಹಾಯ-ಸಹಕಾರ, ಪ್ರೋತ್ಸಾಹ ಇದ್ದರೆ ಯಶಸ್ವಿಗೊಳಿಸಲು ಸಾಧ್ಯವಿದೆ. ಹಲವರ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಹುಂಕರಿಪಾಟೀಲ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೊದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ವಕೀಲ ಶ್ರೀರಂಗ ಕುಲಕರ್ಣಿ, ಕೆಎಲ್ ಇ ಜೆಎನ್ ಎಂಸಿ ನಿವೃತ್ತ ಅಧೀಕ್ಷಕ ಬಸವರಾಜ ಅಣ್ಣಿಗೇರಿ, ಪತ್ರಕರ್ತ ಭೈರೋಬಾ ಕಾಂಬಳೆ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಸತ್ಕರಿಸಲಾಯಿತು. ವಿಶ್ವನಾಥ ಹೆಬ್ಬಳ್ಳಿ ನಿರೂಪಿಸಿದರು. ನಂತರ ತಿಗಡಿ ಗ್ರಾಮದ ಭಜನಾ ವಾದ್ಯ ಮಹಾಮಂಡಳಿ ಹಾಗೂ ಸುಳೇಭಾವಿಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

Tags:

error: Content is protected !!