State

ವಸೂಲಿಗಾಗಿ ಮಗನನ್ನು ರಾಜಕೀಯಕ್ಕೆ ತಂದಿಲ್ಲ’ ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ!

Share

ಕುಟುಂಬ ರಾಜಕಾರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಟೀಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಭರ್ಜರಿ ಟಾಂಗ್ ನೀಡಿದ್ದಾರೆ. “ನನ್ನ ಮಗನನ್ನು ನಾನು ವಸೂಲಿ ಮಾಡಲು ರಾಜಕೀಯಕ್ಕೆ ಬಿಟ್ಟಿಲ್ಲ” ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸವನ್ನು ಕೆದಕಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಸೋತಾಗ ಮನೆಗೆ ಬಂದು ಕಣ್ಣೀರು ಹಾಕಿದ್ದನ್ನು ನೆನಪಿಸಿದರು. “ಅಂದು ಬಕೆಟ್ ಇಟ್ಟಿದ್ದರೆ ಕಣ್ಣೀರು ತುಂಬುತ್ತಿತ್ತು” ಎಂದು ವ್ಯಂಗ್ಯವಾಡಿದ ಅವರು, ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಬಂದು ಕೇವಲ 5 ಸೀಟು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಹೆದರಿಸಿ ಸಿಎಂ ಕುರ್ಚಿ ಹಿಡಿದಿದ್ದಾರೆ, ಅವರು ಸ್ಥಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಇನ್ನು ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತದ ಬಗ್ಗೆ ಕುಟುಕಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಸಿಎಂ ಆಗಿರುವುದಕ್ಕೆ ನಮಗಲ್ಲ, ಅವರದೇ ಪಕ್ಷದ ನಾಯಕರಿಗೆ ಹೊಟ್ಟೆಕಿಚ್ಚು ಇದೆ” ಎಂದರು. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಕನಸು ಕಾಣುತ್ತಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕುಮಾರಸ್ವಾಮಿ, “ಬೆಳಿಗ್ಗೆ ಎದ್ದ ಕೂಡಲೇ ಸಮಯಕ್ಕಾಗಿ ಕಾಯುತ್ತಿರುವವರೇ ಸಿದ್ದರಾಮಯ್ಯಗೆ ಬೇನೆ ಹೊಡೆಯುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು. ಕೇವಲ ಬಾಯಿ ಮಾತಿನಲ್ಲಿ ಪ್ರಾರ್ಥನೆ ಮಾಡಿದರೆ ಅಥವಾ ಸ್ವಾರ್ಥಕ್ಕಾಗಿ ಕನಸು ಕಂಡರೆ ಭಗವಂತ ಒಲಿಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.

ತಮಿಳುನಾಡಿನಲ್ಲಿ ಮಂಡಿಯೂರುವ ಕಾಂಗ್ರೆಸ್ ಸ್ಥಿತಿ ಬಿಹಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ತನ್ನ ರಾಷ್ಟ್ರೀಯ ಪಕ್ಷದ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮತ್ತು ವಸೂಲಿ ರಾಜಕಾರಣ ಮಿತಿಮೀರಿದೆ ಎಂದು ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಅಧಿಕಾರ ನೀಡಿದ ರೀತಿಯನ್ನು ಕಟುವಾಗಿ ವಿಮರ್ಶಿಸಿದ ಕುಮಾರಸ್ವಾಮಿ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಮೊದಲು ತಮ್ಮ ನಡೆಯನ್ನು ಅವಲೋಕಿಸಿಕೊಳ್ಳಲಿ ಎಂದು ಹರಿಹಾಯ್ದರು.

Tags:

error: Content is protected !!