Bagalkot

ಬಾಗಲಕೋಟೆಯಲ್ಲಿ ಹೈಡ್ರಾಮಾ: ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರದ ಕರಪತ್ರ ಹಂಚಿಕೆ; 7 ಮಂದಿ ಎನ್‌ಎಸ್‌ಯುಐ ಕಾರ್ಯಕರ್ತರು ಪೊಲೀಸರ ವಶಕ್ಕೆ!

Share

ಬಾಗಲಕೋಟೆ ಚುನಾವಣಾ ಕಣದಲ್ಲಿ ಕಿಡಿ ಹೊತ್ತಿಕೊಂಡಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ ಅಪಪ್ರಚಾರದ ಕರಪತ್ರ ಹಂಚುತ್ತಿದ್ದ ತಂಡವೊಂದನ್ನು ಬಿಜೆಪಿ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಕೇಸರಿ ಶಾಲು ಧರಿಸಿ ಬಂದಿದ್ದ ಎನ್‌ಎಸ್‌ಯುಐ ಕಾರ್ಯಕರ್ತರು ಚರಂತಿಮಠ ಅವರ ಭಾವಚಿತ್ರಕ್ಕೆ ಎಕ್ಸ್ ಮಾರ್ಕ್ ಹಾಕಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಾಗಲಕೋಟೆ ನಗರದ ಕುಮಾರೇಶ್ವರ ಕ್ಯಾಂಪಸ್‌ನಲ್ಲಿ ಇಂದು ಮಧ್ಯಾಹ್ನ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಸರಿ ಶಾಲುಗಳನ್ನು ಧರಿಸಿದ್ದ ಸುಮಾರು 18 ಜನರ ಎನ್‌ಎಸ್‌ಯುಐ ತಂಡವು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ ಅವಹೇಳನಕಾರಿ ಕರಪತ್ರಗಳನ್ನು ಹಂಚುತ್ತಿತ್ತು. ಕರಪತ್ರದಲ್ಲಿ “ಬಿಜೆಪಿಗೆ ವೋಟ್ ಹಾಕಿದರೆ ಜೈಲು ಫಿಕ್ಸ್” ಎಂಬ ಬರಹದೊಂದಿಗೆ ಅಭ್ಯರ್ಥಿಯ ಭಾವಚಿತ್ರಕ್ಕೆ ಅಡ್ಡಗೆರೆ ಎಳೆಯಲಾಗಿತ್ತು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಕರಪತ್ರ ಹಂಚುತ್ತಿದ್ದವರ ನಡುವೆ ಭಾರೀ ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಸದ್ಯ ನವನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 7 ಜನರನ್ನು ವಶಕ್ಕೆ ಪಡೆದಿದ್ದು, ಉಳಿದ 11 ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕ್ಯಾಂಪಸ್‌ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಎಲ್ಲರ ವಿರುದ್ಧವೂ ಕಠಿಣ ಎಫ್‌ಐಆರ್ ದಾಖಲಿಸಬೇಕು ಎಂದು ಬಿಜೆಪಿ ನಾಯಕರು ಪೊಲೀಸ್ ಠಾಣೆ ಮುಂದೆ ಪಟ್ಟು ಹಿಡಿದಿದ್ದಾರೆ. ಚುನಾವಣಾ ಸಮಯದಲ್ಲಿ ಅಭ್ಯರ್ಥಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಇಂತಹ ಕುತಂತ್ರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸದ್ಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tags:

error: Content is protected !!