ಬೆಳಗಾವಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆಯಾಗಿರುವ ‘ಆಲಿವ್ ಗ್ರೀನ್ಸ್ ಗೋಲ್ಫ್ ಲೀಗ್’ ಈಗ ಅಂತಿಮ ಹಂತಕ್ಕೆ ತಲುಪಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಗರದ ಸುಪ್ರಸಿದ್ಧ 8 ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯಾವಳಿಯ ಸೆಮಿಫೈನಲ್’ಗೆ ಇಂದು ನಡೆಯುತ್ತಿದೆ. ಭಾನುವಾರದಂದು ಫೈನಲ್ ಪಂದ್ಯ ನಡೆಯಲಿದೆ.

ಬೆಳಗಾವಿಯ ಆಲಿವ್ ಗ್ರೀನ್ಸ್ ಗೋಲ್ಫ್ ಮೈದಾನದಲ್ಲಿ ಚೊಚ್ಚಲ ಆವೃತ್ತಿಯ “ಒಜಿಜಿಎಲ್ ಸೀಸನ್ 1” ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮಾರ್ಚ್ 21 ರಂದು ಚಾಲನೆಗೊಂಡ ಈ ಲೀಗ್ನಲ್ಲಿ ಮಿಹಿರ್ ಪೋತ್ದಾರ್ ಎಲೆವೆನ್, ಡೈನಾಮಿಕ್ಸ್ ಸಿಲ್ವರ್ ಬಿಲ್ ಸ್ಟಾರ್ಸ್, ರಾಯಲ್ ಕಿಂಗ್ಸ್, ಕ್ಲೌಡ್ 9 ಟೈಗರ್ಸ್, ಎಸ್ಬಿಜಿ ವಾರಿಯರ್ಸ್, ಯುನಿವರ್ಸಲ್ ಈಗಲ್ಸ್, ಆದಿತ್ಯ ಎಲೈಟ್ ಚಾಂಪಿಯನ್ಸ್ ಮತ್ತು ದಿ ಮಾಸ್ಟರ್ಸ್ ತಂಡಗಳು ಜಯಕ್ಕಾಗಿ ಕಾದಾಡುತ್ತಿವೆ. ಪ್ರತಿಯೊಂದು ತಂಡವು 8 ಪ್ರಮುಖ ಆಟಗಾರರು ಹಾಗೂ ಮೀಸಲು ಆಟಗಾರರನ್ನು ಒಳಗೊಂಡಿದ್ದು, ಒಟ್ಟು 100ಕ್ಕೂ ಹೆಚ್ಚು ಗೋಲ್ಫ್ ಪಟುಗಳು ಈ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿದ್ದಾರೆ.

ಈ ಪಂದ್ಯಾವಳಿಯ ವಿಶೇಷವೆಂದರೆ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಸಮಾನ ಉತ್ಸಾಹದಿಂದ ಒಟ್ಟಾಗಿ ಕಣಕ್ಕಿಳಿದಿರುವುದು. ಈಗಾಗಲೇ ಎರಡು ಸುತ್ತಿನ ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇಂದು ಮೂರನೇ ಸುತ್ತು ಹಾಗೂ ಅತ್ಯಂತ ನಿರ್ಣಾಯಕವಾದ ಸೆಮಿಫೈನಲ್ ಪಂದ್ಯಗಳು ಜರುಗಲಿವೆ. ಮೈದಾನದ ಹಸಿರು ಹಾಸಿನ ಮೇಲೆ ತಮ್ಮ ಕೌಶಲ್ಯ ಮೆರೆಯುತ್ತಿರುವ ಆಟಗಾರರನ್ನು ಪ್ರೋತ್ಸಾಹಿಸಲು ಅಪಾರ ಸಂಖ್ಯೆಯ ಗೋಲ್ಫ್ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ.
ಬೆಳಗಾವಿಯ ಕ್ರೀಡಾ ಭೂಪಟದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬ್ರಿಗೇಡಿಯರ್ ಎಚ್.ಯು ಮರಾಠೆ, ಅಭಯ್ ಕುಲಕರ್ಣಿ, ಸುಷ್ಮಾ ಭಟ್, ಹರೀಶ್ ಗುಲಬಾನಿ ಮತ್ತು ಹವಾಲ್ದಾರ್ ಶಾಂತಾರಾಮ್ ಅವರು ಶುಭ ಹಾರೈಸಿದ್ದಾರೆ.
ಕ್ರೀಡಾಳುಗಳಲ್ಲಿ ಮನೆ ಮಾಡಿರುವ ಸಂಭ್ರಮ ಹಾಗೂ ಪೈಪೋಟಿ ನೋಡಿದರೆ, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯು ಅತ್ಯಂತ ರೋಚಕವಾಗಿರಲಿದೆ ಎಂಬುದು ಖಚಿತವಾಗಿದೆ.
