Vijaypura

ಗೊಂದಲದ ನಡುವೆಯೇ ಹನುಮ ಜಯಂತಿ ಆಚರಣೆ; ರಾಮಸುತನಿಗೆ ಎರಡೆರಡು ದಿನ ಜಯಂತಿ

Share

ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ; ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು “ಮಾರುತಿ”, “ಆಂಜನೇಯ” ಮತ್ತು “ಪವನಸುತ” ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ. ಹನುಮಾನ್ ಜಯಂತಿ ಏಪ್ರಿಲ್ 1 ಅಥವಾ 2 ಯಾವಾಗ ಎಂಬ ಗೊಂದಲದ ನಡುವೆಯೂ ವಿಜಯಪುರ ನಗರದಲ್ಲಿ ಕೆಲವೆಡೆ ಸಂಭ್ರಮದಿಂದ ಆಚರಿಸಲಾಯಿತು. ಈ ಕುರಿತು ಇಲ್ಲಿದೆ ಒಂದು ವರದಿ‌‌..

ಹೌದು ಈ ಬಾರಿ ರಾಮಭಕ್ತ, ಚಿರಂಜೀವಿ ಹನುಮಂತನ ಜಯಂತಿಯು ಗೊಂದಲಕ್ಕೀಡು ಮಾಡಿದೆ. ಏಪ್ರಿಲ್ ಒಂದು ಅಥವಾ ಎರಡಾ ಎಂಬ ಗೊಂದಲ ಹುಟ್ಟು ಹಾಕಿದೆ. ಈ ಬಾರಿ ರಾಮನವಮಿಯೂ ಕೂಡಾ ಗೊಂದಲ ಉಂಟು ಮಾಡಿತ್ತು‌. ಈ ಗೊಂದಲದ ನಡುವೆಯೂ ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮದಿಂದ ಹನುಮ ಜಯಂತಿ ಆಚರಿಸಲಾಯಿತು. ನಗರದ ಆದರ್ಶ ನಗರದಲ್ಲಿರುವ ದೇವಸ್ಥಾನದಲ್ಲಿ ನಸುಕಿನ ಜಾವ 5.30ಕ್ಕೆ ಶ್ರೀ ಬಾಲ ಹನುಮಂತನ ತೊಟ್ಟಲು ಮತ್ತು ಜನೋತ್ಸವ ಜರುಗಿದವು. ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆದವು. ಇದೇ ವೇಳೆ ರಥೋತ್ಸವ ಜರುಗಿತು. ಮಧ್ಯಾಹ್ನ ಅನ್ನಪ್ರಸಾದ ಜರುಗಿತು. ಇನ್ನೂ ಭಕ್ತರು ಮಾರುತಿ ದೇವರ ಜನ್ಮೋತ್ಸವವನ್ನು ಭಕ್ತಿ ಮತ್ತು ಭಾವಪರವಶದಿಂದ ಆಚರಿಸಿದರು. ಜಿಲ್ಲೆಯ ಹಲವೆಡೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವುದರ ಜತೆಗೆ, ಮನೆಯನ್ನೂ ವಿಶೇಷವಾಗಿ ಅಲಂಕರಿಸಿ ಪೂಜೆ ಮಾಡಿದರು. ಇಂದು ಹಲವರು ಉಪವಾಸ ವ್ರತವನ್ನು ಕೈಗೊಳ್ಳುವ ಮೂಲಕ ಅಂಜನಿಪುತ್ರನ ಕೃಪೆಗೆ ಪಾತ್ರರಾದರು.

ಇನ್ನು ಈ ಗೊಂದಲದಿಂದಾಗಿ ವಿಜಯಪುರ ಜಿಲ್ಲೆಯ ಹಲವೆಡೆ ನಾಳೆ ಜಯಂತಿ ಆಚರಿಸಲಾಗುತ್ತಿದೆ. ಈ ಕುರಿತು ನಿಮ್ಮ ಇನ್ ನ್ಯೂಜ್ ಮಾಹಿತಿ ಕಲೆ ಹಾಕಿದಾಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆ ತಿಥಿಯು ಏಪ್ರಿಲ್ 1 ರ ಬೆಳಗ್ಗೆ7.06 ರಿಂದ ಶುರುವಾಗಿ ಏಪ್ರಿಲ್ 2 ರ ಬೆಳಗ್ಗೆ 7. 41ಕ್ಕೆ ಕೊನೆಗೊಳ್ಳುವುದು. ಆದ್ದರಿಂದ ಈ ಪವಿತ್ರ ಹಬ್ಬವನ್ನು ಏಪ್ರಿಲ್ 2 ರಂದು ಭಕ್ತಿ ಸಡಗರದಿಂದ ಆಚರಿಸಬೇಕು ಎಂದು ನಗರದ ಮಧಲಾ ಮಾರುತಿ ದೇವಸ್ಥಾನದ ಅರ್ಚಕರಾದ ಗೋವಿಂದ ಜೋಶಿ ತಿಳಿಸಿದ್ದಾರೆ‌.

ಇನ್ನೂ ಇಂದು ಹನುಮ ಜಯಂತಿ ಆಚರಿಸಿದ ದೇವಸ್ಥಾನಗಳ ಅರ್ಚಕರ ಪ್ರಕಾರ ಹನುಮ ಹುಟ್ಟಿದ್ದು ದವನದ ಹುಣ್ಣಿಮೆಯಂದು ಇಂದು ಸಂಪೂರ್ಣವಾಗಿ ಹುಣ್ಣುಮೆ ದೊರೆಯಲಿದೆ. ನಾಳೆ ಅಲ್ಪ ಪ್ರಮಾಣದಲ್ಲಿ ಅಂದರೆ ಘಟಿಕಾ ಮಾತ್ರ ದೊರೆಯಲಿದೆ ಹೀಗಾಗಿ ಇಂದೇ ಹನುಮ ಜಯಂತಿ ಆಚರಿಸಲಾಯಿತು ಎಂದು ರಾಘವೇಂದ್ರ ಆಚಾರ್ಯರು ತಿಳಿಸಿದರು.

ಒಟ್ಟಾರೆ ಗೊಂದಲದ ನಡುವೆಯೂ ಭಕ್ತರು ಚಿರಂಜೀವಿ ಹನುಮಂತ ದೇವರ ಜಯಂತಿ ಆಚರಿಸಿ ಕೃತಾರ್ಥರಾದರು. ಇನ್ನೂ ಕೆಲವೆಡೆ ನಾಳೆ ಜಯಂತಿ ಆಚರಿಸಲು ಸಿದ್ಧತೆಗಳನ್ನು ಭರ್ಜರಿಯಾಗಿ ನಡೆಸಲಾಗುತ್ತಿದೆ.

Tags:

error: Content is protected !!