ಬೆಳಗಾವಿ ನಗರದ ಐತಿಹಾಸಿಕ ಸೇಂಟ್ರಲ್ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ವಿವಿಧೆಡೆ ಇಂದು ಗುಡ್ ಫ್ರೈಡೆಯನ್ನು ಅತ್ಯಂತ ಭಕ್ತಿ ಮತ್ತು ಗಂಭೀರತೆಯಿಂದ ಆಚರಿಸಲಾಯಿತು. ಲೋಕದ ಪಾಪಗಳ ವಿಮೋಚನೆಗಾಗಿ ಶಿಲುಬೆಗೇರಿದ ಏಸು ಕ್ರಿಸ್ತರ ಬಲಿದಾನವನ್ನು ಭಕ್ತರು ಈ ಸಂದರ್ಭದಲ್ಲಿ ಸ್ಮರಿಸಿದರು.
ಬೆಳಗಾವಿಯ ಸೇಂಟ್ರಲ್ ಮೆಥೋಡಿಸ್ಟ್ ಚರ್ಚ್ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಕ್ರೈಸ್ತ ಬಾಂಧವರು ಎಲ್ಲರೂ ಸಭೆ ಸೇರಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

ನಂತರ ರೆವ್ಹರೆಂಡ್ ಶಾಂತಪ್ಪ ಅಂಕಲಗಿ, ರೆವ್ಹರೆಂಡ್ ಸಿ.ಎಸ್.ಹುಲಗೇರಿ ಮತ್ತು ರೆವ್ಹರೆಂಡ್ ಸಂಜಯ್ ಸಾಮ್ಯೂಲ್ ಅವರು ಭಕ್ತರನ್ನು ಉದ್ದೇಶಿಸಿ ಗುಡ್ ಫ್ರೈಡೆ ಸಂದೇಶ ನೀಡಿದರು. ಏಸು ಕ್ರಿಸ್ತರು ಅನುಭವಿಸಿದ ಯಾತನೆ, ಅವರು ಧರಿಸಿದ ಮುಳ್ಳಿನ ಕಿರೀಟ ಮತ್ತು ಅಂತಿಮವಾಗಿ ಶಿಲುಬೆಯ ಮೇಲೆ ಮರಣವನ್ನಪ್ಪಿದ ಘಟನೆಗಳನ್ನು ನೆನಪಿಸಿದ ಧರ್ಮಗುರುಗಳು, ಇದು ಕೇವಲ ದುಃಖದ ದಿನವಲ್ಲ, ಬದಲಿಗೆ ಅನ್ಯಾಯದ ವಿರುದ್ಧ ಸತ್ಯ ಜಯಿಸಿದ ಪವಿತ್ರ ದಿನ ಎಂದು ಬೋಧಿಸಿದರು. ಮನುಕುಲದ ಒಳಿತಿಗಾಗಿ ಕ್ರಿಸ್ತರು ನೀಡಿದ ನಿಸ್ವಾರ್ಥ ತ್ಯಾಗವು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು.ಶಿಲುಬೆಯ ಮೇಲಿರುವಾಗಲೂ ತನಗೆ ಹಿಂಸೆ ನೀಡಿದವರನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ ಏಸುವಿನ ಕ್ಷಮಾಗುಣವೇ ಈ ದಿನದ ಸಾರವಾಗಿದೆ ಎಂದು ಧರ್ಮಗುರುಗಳು ಒತ್ತಿ ಹೇಳಿದರು. “ತಂದೆಯೇ ಇವರನ್ನು ಕ್ಷಮಿಸು” ಎಂಬ ಕ್ರಿಸ್ತರ ಮಾತುಗಳು ಸೇಡಿನ ಹಾದಿಗಿಂತ ಪ್ರೀತಿಯ ಹಾದಿ ದೊಡ್ಡದೆಂದು ನಮಗೆ ಕಲಿಸುತ್ತದೆ. ಈ ಗುಡ್ ಫ್ರೈಡೆಯು ಸಾವಿನ ಅಂತ್ಯವಲ್ಲ, ಬದಲಿಗೆ ಬರುವ ಈಸ್ಟರ್ ಭಾನುವಾರದ ಪುನರುತ್ಥಾನದ ಭರವಸೆಯಾಗಿದೆ. ಕಷ್ಟಗಳ ನಂತರ ಸುಖ ಮತ್ತು ಅಧರ್ಮದ ನಂತರ ಧರ್ಮದ ವಿಜಯ ಖಂಡಿತ ಎಂಬ ಮಹತ್ವದ ಸಂದೇಶದೊಂದಿಗೆ ಬೆಳಗಾವಿಯ ವಿವಿಧೆಡೆ ಪ್ರಾರ್ಥನೆ ಹಾಗೂ ಉಪವಾಸದ ಮೂಲಕ ಏಸುವಿಗೆ ಭಕ್ತಿಪೂರ್ವಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಭಾಗಿಯಾಗಿದ್ಧರು.
