Belagavi

ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡುವುದು ಇಂದಿನ ಅಗತ್ಯ – ಆರ್ಯಶೇಖರ ಶ್ರೀ

Share

ಬೆಳಗಾವಿ ; ಇಂದಿನ ಮಕ್ಕಳಿಗೆ ಉನ್ನತ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಇಂದಿನ ಅಗತ್ಯ ವಾಗಿದೆ ಎಂದು ಜೈನ ಮುನಿ ಪ.ಪೂ.ಮುನಿರಾಜ ಆರ್ಯಶೇಖರ ವಿಜಯಜಿ ಮಹಾರಾಜರು ಇಂದಿಲ್ಲಿ ಹೇಳಿದರು. ‌

ಬೆಳಗಾವಿಯಲ್ಲಿಂದು ಮಿಲೆನಿಯಂ ಗಾರ್ಡನದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ ಆರ್ಗನೈಸೇಶನ್ ಜಿತೊ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿಶ್ವ ನವಕಾರ ದಿನಾಚರಣೆಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳು ಕಾಣಲು ಸಿಗುತ್ತಿಲ್ಲ. ಮಕ್ಕಳಿಗೆ ಕೇವಲ ಉನ್ನತ ಶಿಕ್ಷಣ ನೀಡಿದರೆ ಸಾಲದು. ಅವರಿಗೆ ಉತ್ತಮ ಸಂಸ್ಕಾರ ನೀಡುವದರ ಜೊತೆಗೆ ಉತ್ತಮ ನಾಗರಿಕರನ್ನಾಗಿ ಮಾಡಬೇಕಾಗಿದೆ ಎಂದರು.
ಭಾರತ ದೇಶದ ರಾಷ್ಟ್ರ ನಿರ್ಮಾಣದಲ್ಲಿ ಜೈನ ಸಮಾಜದ ಕೊಡುಗೆ ಅಪಾರವಿದೆ.‌ ದೇಶದ ಸ್ವಾತಂತ್ರ್ಯ ಮತ್ತು ಹಿಂದು ರಾಷ್ಟ್ರ ರಕ್ಷಣೆಗೆ ಹೋರಾಡಿದ ಮಹಾರಾಣಾ ಪ್ರತಾಪ್‌ , ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ರಾಜ ಮಹಾರಾಜರ ಕಾಲದಲ್ಲಿ ಜೈನ ಸಮಾಜದ ಪ್ರಮುಖರು ಸಹಕರಿಸಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತಿಹಾಸಕಾರರು ಈ ಬಗ್ಗೆ ಮೌನ ವಹಿಸುವ ಮೂಲಕ ಜೈನ ಸಮಾಜದ ಮೇಲೆ ಅನ್ಯಾಯ ಮಾಡಿದ್ದಾರೆ. ಆದರೆ ಸತ್ಯ ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಎಂದರು.

ಮುಂಬರುವ ದಿನಗಳಲ್ಲಿ ಜೈನ ಸಮಾಜ ಅಹಿಂಸೆ ಜೊತೆ ತನ್ನ ಸಮಾಜವನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೈನ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕೆಂದು ಹೇಳಿದ ಅವರು, ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಈಗಾಗಲೇ ಮುನಿಗಳು ಹೇಳಿದಂತೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು.‌ ಮಕ್ಕಳು ಉತ್ತಮವಾಗಿ ಬೆಳೆದರೆ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ , ಇಂದು ಜಿತೋ ಸಂಸ್ಥೆ ಆಯೋಜಿಸಿರವ ವಿಶ್ವ ನವಕಾರ ದಿನಾಚರಣೆ ಇಡಿ ವಿಶ್ವದಲ್ಲಿ ಆಚರಿಸಲಾಗುತ್ತಿದ್ದು, ಜಿತೋ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಮಾರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಜಿತೊ ಅಧ್ಯಕ್ಷ ಹರ್ಷವರ್ಧನ ಇಂಚಲ ಅವರು ಮಾತನಾಡಿ ಇಂದಿನ ಈ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯಿಂದ 3 ಲಕ್ಷ 24 ಸಾವಿರ ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದು, ಒಟ್ಟು 430 ಕೇಂದ್ರಗಳಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ಜಿತೋ ಬೆಳಗಾವಿ ವಲಯ ಒಂದು ದಾಖಲೆ ನಿರ್ಮಿಸಿದಂತಾಗಿದೆ ಎಂದರು.

ದೆಹಲಿಯಲ್ಲಿ ನಡೆದ ಮುಖ್ಯ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ ಶಹಾ ಉದ್ಘಾಟಿಸಿದರು.
ಬೆಳಗಾವಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 4 ಸಾವಿರ ಜನರು ಭಾಗವಹಿಸಿದ್ದರು.
ಇಂದಿನ ಸಮಾರಂಭದ ವೇದಿಕೆ ಮೇಲೆ
ಜಿತೋ ಅಪೆಕ್ಸ ನಿರ್ದೆಶಕ ಪುಷ್ಪಕ ಹಣಮನ್ನವರ, ಕಾರ್ಯಕ್ರಮ ಸಂಯೋಜಕ ಪ್ರವೀಣ ಸಾಮಸುಖಾ, ಜಿತೋ ಯುಥ ವಿಂಗ ಪದಾಧಿಕಾರಿಗಳು ಜಿತೋ ಲೇಡಿಜ ವಿಂಗ ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ವಿಕ್ರಮ ಜೈನ ಕಾರ್ಯಕ್ರಮ ನಿರೂಪಿಸಿದರು. ಜಿತೋ ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ವಂದಿಸಿದರು. ‌

Tags:

error: Content is protected !!