BELAGAVI

ಗೋಮಾತೆಗೆ ‘ರಾಷ್ಟ್ರೀಯ ದೇವತೆ’ ಸ್ಥಾನಮಾನ ನೀಡಿ

Share

ಗೋಮಾತೆಯನ್ನು ರಾಷ್ಟ್ರೀಯ ದೇವತೆಯೆಂದು ಘೋಷಿಸಬೇಕೆಂದು ಮತ್ತು ಏಪ್ರಿಲ್ 27 ರನ್ನು ‘ಗೋಮಾತಾ ಗೌರವ ದಿನ’ವನ್ನಾಗಿ ಆಚರಿಸುವ ನಿಟ್ಟಿನಲ್ಲಿ ‘ಗೋಮಾತಾ ಗೌರವ ದಿನ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಬೆಳಗಾವಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ರ್ಯಾಲಿಯು ಬೆಳಗಾವಿ ನಗರದ ಅಂಬೇಡ್ಕರ್ ಉದ್ಯಾನವನದಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.

ಕೃಷಿ ಹಾಗೂ ಇತರ ಬಳಕೆಗಳಲ್ಲಿ ಗೋಮಯ ಮತ್ತು ಗೋಮೂತ್ರದ ಮಹತ್ವವನ್ನು ಹೆಚ್ಚಿಸಲು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಇವುಗಳ ಕುರಿತು ದೊಡ್ಡ ಪ್ರಮಾಣದ ಸಂಶೋಧನೆಗಳು ನಡೆಯಬೇಕು ಎಂದು ಅವರು ಪ್ರತಿಪಾದಿಸಿದರು. ಸರ್ಕಾರವು ಗೋವಿನ ಹಾಲು, ಮೊಸರು, ತುಪ್ಪ, ಗೋಮಯ ಮತ್ತು ಗೋಮೂತ್ರಗಳ ಬಳಕೆಯನ್ನು ಉತ್ತೇಜಿಸಲು ಸೂಕ್ತ ನೀತಿಗಳನ್ನು ರೂಪಿಸಬೇಕು. ಅಲ್ಲದೆ, ಗೋಮಯ ಮತ್ತು ಗೋಮೂತ್ರಕ್ಕೆ ಸಂಬಂಧಿಸಿದ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಿ, ಹೊಸ ಸಂಶೋಧನೆಗಳಿಗೆ ವೇದಿಕೆ ಕಲ್ಪಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.

ರಾಸಾಯನಿಕ ಕೃಷಿಯನ್ನು ನಿಯಂತ್ರಿಸಿ, ಗೋಮಯ ಆಧಾರಿತ ಕೃಷಿಯನ್ನು ಉತ್ತೇಜಿಸಬೇಕು. ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗಳಲ್ಲಿ ಗೋಡೆಯ ಬಣ್ಣಕ್ಕೆ ಬದಲಾಗಿ ಗೋಮಯ ಬಣ್ಣವನ್ನು ಬಳಸಬೇಕು ಹಾಗೂ ಫಿನೈಲ್ ಬದಲು ‘ಗೋನಿಲ್’ ಅನ್ನು ಬಳಸಬೇಕೆಂದು ಅವರು ಸಲಹೆ ನೀಡಿದರು. ಆಯುರ್ವೇದ ಆಸ್ಪತ್ರೆಗಳಲ್ಲಿ ಪಂಚಗವ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಬೇಕು. ಗೋಮಯ ಮತ್ತು ಗೋಮೂತ್ರವನ್ನು ಆಧರಿಸಿದ ಕೈಗಾರಿಕೆಗಳನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಯಾವುದೇ ಕಾರ್ಖಾನೆಗೆ ಭೂಮಿಯನ್ನು ನೀಡುವ ಮೊದಲು, ಆ ಉದ್ಯಮಿಗಳು ಗೋಸೇವೆಗೆ ಸಂಬಂಧಿಸಿದ ಕನಿಷ್ಠ ಒಂದು ಕೆಲಸವನ್ನಾದರೂ ಮಾಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Tags:

error: Content is protected !!