State

ರಾಜ್ಯದಲ್ಲಿ ಗ್ಯಾಸ್ ಟ್ರಬಲ್ ಕಿಚ್ಚು: ಕೇಂದ್ರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ! ವೈಫಲ್ಯ ಒಪ್ಪಿ ಬಿಜೆಪಿ ಕ್ಷಮೆಯಾಚಿಸಲಿ ಎಂದ ಡಿಸಿಎಂ

Share

ರಾಜ್ಯದಲ್ಲಿ ತಲೆದೋರಿರುವ ಅಡುಗೆ ಅನಿಲದ ಅಭಾವ ಈಗ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮ ಮತ್ತು ಆಟೋ ಚಾಲಕರು ಬೀದಿಗೆ ಬೀಳುವಂತಾಗಿದ್ದು, ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಉಂಟಾಗಿರುವ ಗ್ಯಾಸ್ ಅಭಾವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಮನೆಯಲ್ಲಾದರೆ ಹೇಗೋ ಅಡುಗೆ ಮಾಡಿಕೊಳ್ಳಬಹುದು, ಆದರೆ ಹೋಟೆಲ್ ನಡೆಸುವವರು ಮತ್ತು ಸಿಎನ್‌ಜಿ ಅವಲಂಬಿತ ಆಟೋ ಚಾಲಕರ ಪರಿಸ್ಥಿತಿ ಏನು?” ಎಂದು ಪ್ರಶ್ನಿಸಿದರು. ಅನಿಲ ಪೂರೈಕೆಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದ್ದು, ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ, ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. “ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಬಿಜೆಪಿಯವರು ಯಾಕೆ ತುಟಿ ಬಿಚ್ಚುತ್ತಿಲ್ಲ? ತಮ್ಮ ತಪ್ಪಿನಿಂದ ಜನರಿಗೆ ತೊಂದರೆಯಾಗಿದೆ ಎಂದು ಅವರು ಕ್ಷಮೆಯಾಚಿಸಬೇಕಿತ್ತು. ಆದರೆ ಕೇಂದ್ರ ತನ್ನ ವೈಫಲ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ” ಎಂದು ಕಿಡಿಕಾರಿದರು. ಕೂಡಲೇ ಕೇಂದ್ರ ಹಸ್ತಕ್ಷೇಪ ಮಾಡಿ ಗ್ಯಾಸ್ ಪೂರೈಕೆ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆಯನ್ನು ನೀಡಿದರು.

Tags:

error: Content is protected !!