BELAGAVI

ಹೆಣ್ಣೆಂಬ ಕಾರಣಕ್ಕೆ ಹದಿನೈದೇ ದಿನದ ಹಸುಗೂಸಿಗೆ ವಿಷವಿಕ್ಕಿದ ಪಾಪಿ ತಂದೆ

Share

ಬೆಳಗಾವಿಯ ಉಕ್ಕಡ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಕಣ್ಣು ಬಿಡದ 15 ದಿನದ ಹೆಣ್ಣು ಮಗುವನ್ನು ಸ್ವಂತ ತಂದೆಯೇ ಕೊಲೆ ಮಾಡಿದ್ದು, ಈ ಕ್ರೂರಿ ಭೀಮರಾಯನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಇಡೀ ಗ್ರಾಮವೇ ಬೀದಿಗಿಳಿದು ಆಕ್ರೋಶ ಹೊರಹಾಕುತ್ತಿದೆ.

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ತಂದೆಯೇ ಮಗುವಿನ ಯಮನಾದ ಘಟನೆ ವರದಿಯಾಗಿದೆ. ಹೆರಿಗೆಗಾಗಿ ತವರು ಮನೆಯಲ್ಲಿದ್ದ ಪತ್ನಿ ಶೀಲಾ ಅವರನ್ನು ನೋಡಲು ಬಂದಿದ್ದ ಪತಿ ಭೀಮರಾಯ, ತನ್ನ 15 ದಿನದ ಮಗು ಪ್ರಿಯಾಂಕಾಗೆ ವಿಷವುಣಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಮಗು ಹೆಣ್ಣೆಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿ ತೆರಳಿದ ಕೆಲವೇ ಹೊತ್ತಿನಲ್ಲಿ ಮಗು ಕೊನೆಯುಸಿರೆಳೆದಿದೆ. ಸದ್ಯ ಪೊಲೀಸರು ಆರೋಪಿ ಭೀಮರಾಯನನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

ಈ ಅಮಾನುಷ ಘಟನೆಯನ್ನು ಖಂಡಿಸಿ ಮಂಗಳವಾರ ಉಕ್ಕಡ ಗ್ರಾಮಸ್ಥರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮಗುವಿನ ಕೊಲೆಗಡುಕ ತಂದೆಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು ಮತ್ತು ಆತನಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಪಾಲ್ಗೊಂಡು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಮೊರೆಯಿಟ್ಟರು.
ಹೆಣ್ಣು ಮಗುವೆಂದು ವಿಷವುಣಿಸಿ ಕೊಲೆ ಮಾಡಿದ ಪ್ರಕರಣದ ಪೊಲೀಸರು ತನಿಖೆಯನ್ನು ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಿ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿ ಶೀಘ್ರದಲ್ಲೇ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಬೇಕೆಂದು ನ್ಯಾಯವಾದಿ ಎನ್. ಆರ್. ಲಾತೂರ್ ಅಗ್ರಹಿಸಿದರು.

ಇನ್ನು ಶಿವಾಜಿರಾವ್ ಕಾಗಣಿಕರ ಅವರು ಸ್ವಂತ ಮಗಳ ಮೇಲೆ ದಯಾ ಮಯಾ ತೋರದ ಭೀಮರಾಯಿ ಪಶುಗಿಂತ ಕಡೆಯಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆತನಿಗೆ ನೀಡಿದ ಶಿಕ್ಷೆ ಮತ್ತೇ ಈ ರೀತಿಯ ಘಟನೆಗಳು ನಡೆಯದಂತೆ ಮಾಡಲು ಪಾಠವಾಗಬೇಕೆಂದರು.
ಈ ಸಂದರ್ಭದಲ್ಲಿ ಉಕ್ಕಡ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!