ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಬಾಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಮುಗಿಲು ಮುಟ್ಟಿದೆ. ಮಾಜಿ ಸಚಿವ ಮುರಗೇಶ್ ನಿರಾಣಿ ಮಾಲೀಕತ್ವದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ರೈತರು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಮತ್ತೆ ಬೀದಿಗೆ ಬಂದಿದೆ. ಮಾಜಿ ಸಚಿವ ಮುರಗೇಶ್ ನಿರಾಣಿ ಅವರಿಗೆ ಸೇರಿದ ಹಿಪ್ಪರಗಿ-ಮೈಗೂರಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯ ಯುನಿಟ್-2 ಕಚೇರಿಗೆ ರೈತರು ಬೀಗ ಜಡಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2021-22ನೇ ಸಾಲಿನ ಎರಡನೇ ಕಂತಿನ ಬಾಕಿ ಹಣ ಹಾಗೂ ಪ್ರಸಕ್ತ 2025-26ನೇ ಸಾಲಿನ ಕಬ್ಬಿನ ಬಿಲ್ ಪಾವತಿಸದೆ ಕಾರ್ಖಾನೆ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರೈತರು ಆಪಾದಿಸಿದ್ದಾರೆ.
ಕಾರ್ಖಾನೆಯು ಹಣ ಪಾವತಿಯಲ್ಲಿ ತಾರತಮ್ಯ ಮಾಡುತ್ತಿದ್ದು, ತಮಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿ ಸಣ್ಣ ರೈತರನ್ನು ಕಡೆಗಣಿಸುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ. ಕುತ್ತಿಗೆಗೆ ಬಂದಿರುವ ಸಾಲದ ಸುಳಿಗೆ ಸಿಲುಕಿರುವ ಅನ್ನದಾತರು, ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆಗೂ ಹಣ ಸಿಗದೆ ಕಂಗಾಲಾಗಿದ್ದಾರೆ. ಕೂಡಲೇ ಬಾಕಿ ಹಣ ಪಾವತಿಸದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
