KHANAPUR

ಜಿ.ಎಂ. ಸಿದ್ದೇಶ್ವರ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಕಿಡಿ

Share

ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಸೇರಿದ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ತಿಂಗಳು ಕಳೆದರೂ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ತುಮ್ಮಿನಕಟ್ಟಿಯಲ್ಲಿರುವ ಜಿ.ಎಂ. ಶುಗರ್ ಮತ್ತು ಎನರ್ಜಿ ನಿಯಮಿತ ಕಾರ್ಖಾನೆಯ ವಿರುದ್ಧ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ರೈತರು 4 ಸಾವಿರ ಟನ್‌ಗೂ ಅಧಿಕ ಕಬ್ಬನ್ನು ಪೂರೈಸಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಕಬ್ಬು ಸರಬರಾಜು ಮಾಡಿದ 15 ದಿನಗಳಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದ ಕಾರ್ಖಾನೆ ಆಡಳಿತ ಮಂಡಳಿ, ಈಗ ಬಿಲ್ ನೀಡಲು ಮೀನಾಮೇಷ ಎಣಿಸುತ್ತಿದೆ.

ಕಾರ್ಖಾನೆಯಿಂದ 2 ಕೋಟಿಗೂ ಅಧಿಕ ಮುಂಗಡ ಹಣ ಪಡೆದಿದ್ದ ಕಬ್ಬು ಕಟಾವು ಗುತ್ತಿಗೆದಾರ ‘ಶಮಶೇರ್ ಗ್ರೂಪ್’ ಮಾಲೀಕನನ್ನು ರೈತರೇ ಪತ್ತೆಹಚ್ಚಿ ಕರೆತರಬೇಕು ಎಂದು ಕಾರ್ಖಾನೆ ಸಿಬ್ಬಂದಿ ಉಡಾಪೆ ಉತ್ತರ ನೀಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಕಂಗೆಟ್ಟಿರುವ ರೈತರು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಬಿಲ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಬಾಕಿ ಹಣ ಪಾವತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಮುಖಂಡ ವಿಠ್ಠಲ ಬೆಳಗಾಂವಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!