ಬೆಳಗಾವಿ ನಗರದ ವಾರ್ಡ್ ನಂಬರ್ 41ರ ವ್ಯಾಪ್ತಿಗೆ ಬರುವ ವಡಗಾಂವನ ಆದರ್ಶ ನಗರದ ಮಹಾಲಕ್ಷ್ಮೀ ಕಾಲನಿಯಲ್ಲಿ ಡ್ರೈನೇಜ್ ಸಮಸ್ಯೆ ಮಿತಿಮೀರಿದೆ. ಕಳೆದ ಒಂದು ವರ್ಷದಿಂದ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೂ, ಸ್ಥಳೀಯ ನಗರಸೇವಕರು ಹಾಗೂ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ವಡಗಾಂವನ ಆದರ್ಶ ನಗರದ ಮಹಾಲಕ್ಷ್ಮೀ ಕಾಲನಿಯ ಮುಖ್ಯ ಡ್ರೈನೇಜ್ ಲೈನ್ ಸಂಪೂರ್ಣವಾಗಿ ಬ್ಲಾಕ್ ಆಗಿದ್ದು, ಮ್ಯಾನ್‌ಹೋಲ್ ಮುಚ್ಚಳದಿಂದಲೇ ಕೊಳಚೆ ನೀರು ಹೊರಗೆ ಚಿಮ್ಮುತ್ತಿದೆ. ಈ ಘನತ್ಯಾಜ್ಯದ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ರಸ್ತೆ ತುಂಬಾ ಹರಡುತ್ತಿದ್ದು, ಇಡೀ ಪ್ರದೇಶ ದುರ್ನಾತ ಬೀರುತ್ತಿದೆ. ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಈ ಚರಂಡಿ ನೀರು ಭೂಮಿಯ ಒಳಗಿನಿಂದ ಜಿನುಗಿ ಹತ್ತಿರದ ಕುಡಿಯುವ ನೀರಿನ ಬಾವಿಗಳನ್ನು ಸೇರುತ್ತಿದೆ. ಇದರಿಂದಾಗಿ ಕಾಲೋನಿಯ ಜನರಿಗೆ ಕುಡಿಯುವ ನೀರಿನ ಅಭಾವದ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅದರಲ್ಲೂ ಸಣ್ಣ ಮಕ್ಕಳು ರೋಗಗಳಿಗೆ ತುತ್ತಾಗುವ ಆತಂಕ ಪೋಷಕರನ್ನು ಕಾಡುತ್ತಿದೆ.

ಮಹಾಲಕ್ಷ್ಮೀ ಕಾಲನಿ ಆದರ್ಶನಗರದಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಕೆರೆಯಂತೆ ನಿಂತಿದ್ದು, ಇಲ್ಲಿನ ಕೊಳವೆ ಭಾವಿಗಳು ಹಾಳಾಗಿವೆ. ಸೊಳ್ಳೆಗಳು ಹೆಚ್ಚಾಗಿ ಜನರಿಗೆ ಸಾಂಕ್ರಾಮೀಕ ರೋಗಗಳ ಭೀತಿ ಎದುರಾಗಿದೆ. ಸಂಬಂಧಿಸಿದ ಇಲಾಖೆಯವರು ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದರೇ, ಜಿಲ್ಲಾಧಿಕಾರಿಗಳ ಮೊರೆ ಹೋಗುತ್ತೇವೆಂದು ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನು ಇಲ್ಲಿರುವ ಎಲ್ಲ ಜನರ ಭಾವಿಗಳ ನೀರು ಹಾಳಾಗಿ ಹೋಗಿದೆ. ಕಳೆದ ಮೂರು ವರ್ಷಗಳಿಂದ ಕೇವಲ ಆಶ್ವಾಸನೆಗಳೇ ಸಿಗುತ್ತಿವೆ ಹೊರತು, ಯಾರೂ ಕೂಡ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಿಲ್ಲವೆಂದು ಸ್ಥಳೀಯ ಮಹಿಳೆಯರು ದೂರಿದರು.
ಈಗ ಏಪ್ರಿಲ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ಇದ್ದರೆ, ಇನ್ನು ಮಳೆಗಾಲದಲ್ಲಿ ನಮ್ಮ ಗತಿ ಏನು?” ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕಪ್ಪೆಗಳು, ಈಗ ಏಪ್ರಿಲ್ ತಿಂಗಳಲ್ಲೇ ಡ್ರೈನೇಜ್ ನೀರಿನಿಂದಾಗಿ ಹೊರಬಂದು ಸದ್ದು ಮಾಡುತ್ತಿವೆ ಎನ್ನುವುದು ಇಲ್ಲಿನ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಡ್ರೈನೇಜ್ ಲೈನ್ ದುರಸ್ತಿ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮಹಾಲಕ್ಷ್ಮಿ ಕಾಲನಿಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
