ಭಾರತದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 113ನೇ ಜಯಂತ್ಯೋತ್ಸವವನ್ನು ಬೆಳಗಾವಿಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಮೆರವಣಿಗೆ ಆರಂಭವಾಯಿತು. ಎಸಿ ಶ್ರವಣ ನಾಯಕ, ಡಿಸಿಪಿ ನಾರಾಯಣ್ ಬರಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೋಳ್ಳಿ, ಮಹಾನಗರ ಪಾಲಿಕೆ ಉಪಾಯುಕ್ತರಾದ ಉದಯಕುಮಾರ್ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಇನ್ನುಳಿದ ಗಣ್ಯರು ಡೊಳ್ಳು ಬಾರಿಸುವ ಮೂಲಕ ಚಾಲನೆಯನ್ನು ನೀಡಿದರು.

ರಾಣಿ ಚೆನ್ನಮ್ಮ ವೃತ್ತ, ಡಾ. ಅಂಬೇಡ್ಕರ್ ರಸ್ತೆ, ಸದಾಶಿವ ನಗರ ಮಾರ್ಗವಾಗಿ ಬೆಳಗಾವಿಯ ಸಂಗಮೇಶ್ವರ ನಗರದ ಡಾ. ಬಾಬು ಜಗಜೀವನರಾಮ್ ಉದ್ಯಾನವನಕ್ಕೆ ತಲುಪಿ, ಡಾ. ಬಾಬು ಜಗಜೀವನರಾಮ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಪ್ರಮುಖರಾದ ಬಸವರಾಜ್ ಅರವಳ್ಳಿ ಅವರು, ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರು ಓರ್ವ ಅತ್ಯಂತ ಪ್ರಭಾವಿ ಸಮಾಜವಾದಿ, ರಾಷ್ಟ್ರನಾಯಕ, ಹಸಿರು ಕ್ರಾಂತಿ ಹರಿಕಾರರಾಗಿದ್ದರು. ಬ್ರಿಟಿಷರ ಕಾಲದಲ್ಲಿಯೂ ಕಾರ್ಮಿಕ ಸಚಿವರಾಗಿ ದೇಶದ ಕಾರ್ಮಿಕರ ಹಿತದಲ್ಲಿ ಸೌಲಭ್ಯಗಳನ್ನು ಜಾರಿಗೊಳಿಸಲು ಶ್ರಮಿಸಿದ್ದರು. ಅವರು ಈ ದೇಶಕಂಡ ಜನಾನುರಾಗಿ ನಾಯಕರಾಗಿದ್ದರು. ಅಲ್ಲದೇ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿಯೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದರು. ಈ ಧೀಮಂತ ನಾಯಕನನ್ನು ದೇಶವು ಎಂದಿಗೂ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದರು.

ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಮತ್ತು ಎಸ್ಪಿ. ಕೆ.ರಾಮರಾಜನ್ ಅವರು ಡಾ. ಬಾಬು ಜಗಜೀವನ್ ರಾಮ್ ಅವರ ಜೀವನವೇ ಒಂದು ಪ್ರೇರಣೆಯಾಗಿದೆ. ಡಾ. ಬಾಬು ಜಗಜೀವನರಾಮ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ರಾಯವ್ವಗೋಳ, ಮಲ್ಲಿಕಾರ್ಜುನ ನಾಯಕ, ಮಲ್ಲೇಶ ಚೌಗಲೆ, ಬಾಬು ಪೂಜಾರಿ, ಮಲ್ಲೇಶ ಕುರಂಗಿ, ಯಲ್ಲಪ್ಪ ಕೋಲಕಾರ, ಸಿದ್ರಾಯ ಮೇತ್ರಿ, ವಿಠ್ಠಲ, ಮಹಾಂತೇಶ ಚಿವಟಗುಂಡಿ, ಪರಶರಾಮ ವಗ್ಗೆನ್ನವರ, ಭಾವಕಣ್ಣಾ ಭಂಗ್ಯಾಗೋಳ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
