ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತೀರ್ಪು ಹೊರಬೀಳುವ ಹಂತದಲ್ಲಿದೆ. ಆದರೆ, ಈ ನಡುವೆ ಯೋಗೀಶ್ ಗೌಡ ಅವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದ ಕಿತ್ತಾಟ ಶುರುವಾಗಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಯೋಗೀಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮತ್ತು ಸಹೋದರಿಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗುರುನಾಥ ಗೌಡ ಮತ್ತು ಅವರ ಪತ್ನಿ ಜ್ಯೋತಿ ಗೌಡ ಅವರು ಕಟ್ಟಿಗೆ ಹಾಗೂ ವೈರ್ನಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಹೋದರಿಯರಾದ ಜಗದೀಶ್ವರಿ ಮತ್ತು ಅಕ್ಕಮಹಾದೇವಿ ಅವರು ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುನಾಥ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಿತ್ತಾಟದ ವಿಡಿಯೋ ಹಾಗೂ ಆಡಿಯೋ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸದ್ಯ ಗ್ರಾಮಾಂತರ ಪೊಲೀಸರು ಗುರುನಾಥ ಗೌಡ ಹಾಗೂ ಅವರ ಪತ್ನಿ ಜ್ಯೋತಿ ಗೌಡ ವಿರುದ್ಧ ಎಫ್ಐಆರ್ು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗುವ ಹಂತದಲ್ಲಿರುವಾಗಲೇ, ಅವರ ಕುಟುಂಬದ ಈ ಆಂತರಿಕ ಕಲಹ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
