ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಇಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಮುಂಬರುವ 2028ರ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆಸೀಫ್ ಸೇಠ್, ಉಪಸಮರದ ಟಿಕೆಟ್ ಹಂಚಿಕೆ ಕುರಿತು ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದರು. ಅಲ್ಪಸಂಖ್ಯಾತರು ಹೆಚ್ಚಿರುವ ಕಡೆ ಟಿಕೆಟ್ ಕೇಳುವುದು ಸಹಜ, ಆದರೆ ಶಾಸಕರು ನಿಧನರಾದಾಗ ಅವರ ಕುಟುಂಬದವರಿಗೆ ಟಿಕೆಟ್ ನೀಡುವುದು ಪಕ್ಷದ ವಾಡಿಕೆಯಾಗಿದೆ. ಈ ನಿರ್ಧಾರದಿಂದ ಸಚಿವ ಝಮೀರ್ ಅಹ್ಮದ್ ಸೇರಿದಂತೆ ಯಾರಲ್ಲೂ ಅಸಮಾಧಾನವಿಲ್ಲ. ಮುಖ್ಯಮಂತ್ರಿಗಳು 2028ರಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸ್ಪಷ್ಟ ಭರವಸೆ ನೀಡಿದ್ದು, ಕಾಂಗ್ರೆಸ್ ಪಕ್ಷ ಎಂದಿಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ ಎಂದು ಅವರು ಪ್ರತಿಪಾದಿಸಿದರು.
ಇನ್ನು ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗುತ್ತಿದೆಯೇ ಹೊರತು ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾತಿ ರಾಜಕಾರಣ ಬಿಟ್ಟು ಎಲ್ಲರನ್ನು ಸಮಾನವಾಗಿ ಕಾಣಬೇಕು. ಜಾತಿ ರಾಜಕಾರಣ ದೇಶವನ್ನು ಹಾಳು ಮಾಡುತ್ತಿದೆ. ಶಾಸಕ ಯತ್ನಾಳ್ ಅವರು ಎಲ್ಲರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋದರೆ ದೇಶದ ದೊಡ್ಡ ನಾಯಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಬೆಳಗಾವಿ ನಗರದ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ, ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬೆಂಬಲ ಸೂಚಿಸಿದರು.
