ಉಗಾರದ ಶ್ರೀ ಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿರಕ್ತಮಠ ಬೀಳೂರಿನ ಪರಮಪೂಜ್ಯ ಶ್ರೀ ಗುರುಚನ್ನಬಸವ ಸ್ವಾಮೀಜಿ ಪ್ರವಚನ ನೀಡುತ್ತಾ, “ಕೈ ಮುಗಿದು ನಮಸ್ಕರಿಸುವ ಸಂಸ್ಕೃತಿ ನಮ್ಮದು, ಶೇಕ್ಹ್ಯಾಂಡ್ನಿಂದಲ್ಲ. ಮೈ ತುಂಬಾ ಬಟ್ಟೆ ಧರಿಸುವ ಸಂಸ್ಕೃತಿ ನಮ್ಮದು, ಅರೆಬರೆ ಬಟ್ಟೆಯಿಂದಲ್ಲ. ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗುರುದೇವಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಆಶ್ರಮದ ಸತ್ಸಂಗ ಸೇವಾ ಬಳಗದ ನೇತೃತ್ವದಲ್ಲಿ ಸೋಮವಾರದಿಂದ ಬುಧವಾರದವರೆಗೆ ಸತ್ಸಂಗ ಕಾರ್ಯಕ್ರಮಗಳು ನಡೆಯಲಿವೆ. ಪ್ರಾರಂಭದಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಗುರುಚನ್ನಬಸವ ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಮುಂದುವರಿದು, ಭಾರತೀಯ ಸಂಸ್ಕೃತಿ ಮಾನವ ಜೀವನವನ್ನು ಮೌಲ್ಯಾಧಾರಿತವಾಗಿ ರೂಪಿಸುವ ಮಹಾನ್ ಪರಂಪರೆ ಹೊಂದಿದೆ. ಆತ್ಮಚಿಂತನೆ, ಸಹಾನುಭೂತಿ ಹಾಗೂ ಸತ್ಯನಿಷ್ಠ ಜೀವನವೇ ಇದರ ಮೂಲವಾಗಿದ್ದು, ಧರ್ಮ ಎಂದರೆ ಆಚರಣೆ ಮಾತ್ರವಲ್ಲ, ಮಾನವೀಯತೆ ಮತ್ತು ನೈತಿಕತೆ ಪಾಲಿಸುವ ಜೀವನ ವಿಧಾನವಾಗಿದೆ ಎಂದರು. ಕುಟುಂಬ ಮೌಲ್ಯಗಳು, ಹಿರಿಯರ ಗೌರವ ಹಾಗೂ ಪ್ರಕೃತಿಯೊಂದಿಗೆ ಸಮತೋಲನದಲ್ಲಿ ಬದುಕುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸುಕ್ಷೇತ್ರ ಪಂಢರಪುರದ ಪೂಜ್ಯ ಬ್ರಹ್ಮ ಚೈತನ್ಯ ಸದ್ಗುರು ಪ್ರಭುರಾಜ್ ವಾಸ್ಕರ್ ಮಹಾರಾಜರು ಮಾತನಾಡಿ, ಇಂದಿನ ವಿಶ್ವದಲ್ಲಿ ಯುದ್ಧದ ಅನಿಶ್ಚಿತತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಸಹನೆ, ನೀತಿ ಹಾಗೂ ತಾಳ್ಮೆ ಅಗತ್ಯವಾಗಿದೆ. ಯುದ್ಧದ ಸಂದರ್ಭದಲ್ಲಿ ಈ ನೀತಿಗಳನ್ನು ಬಳಸುವುದು ಒಂದು ಔಷಧದಂತಿದೆ. ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಮಹಿಳೆಯರ ಮೇಲಿನ ಗೌರವ ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯಗಳಾಗಿವೆ ಎಂದು ಹೇಳಿದರು.

ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ನೆರೆಹೊರೆಯ ದೇಶಗಳೊಂದಿಗೆ ಸ್ನೇಹಭಾವ ಬೆಳೆಸಬೇಕು, ಯುದ್ಧದಿಂದಲ್ಲ. ಭಾಷೆ ಯಾವುದಾದರೂ ಆಗಲಿ, ಅದರೊಳಗಿನ ಸಂಸ್ಕೃತಿ ಮುಖ್ಯವಾಗಿದೆ. ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯವರ ಸಂದೇಶ ಇಂದಿಗೂ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಗುರುದೇವಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಪ್ರವಚನದಲ್ಲಿ, ಮಕ್ಕಳಿಗೆ ಶಿಕ್ಷಣ ನೀಡುವಾಗ ನೀತಿ ಮೌಲ್ಯಗಳನ್ನು ಕಲಿಸಬೇಕು. ಇಂಗ್ಲಿಷ್ ಭಾಷೆಗೆ ವಿರೋಧವಿಲ್ಲ, ಆದರೆ ತಂದೆ-ತಾಯಿ, ಗುರುಗಳು ಹಾಗೂ ಹಿರಿಯರ ಬಗ್ಗೆ ಗೌರವ ಬೆಳೆಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಿರಿಯರಾದ ಸುಭಾಷ್ ಸೇವಾಳೆ ಗುರುಗಳು, ಮಹಾದೇವ ಕಟಗೇರಿ, ವೀರಭದ್ರ ಕಟಗೇರಿ, ಮಂಜುನಾಥ ತಾರದಾಳೆ, ಗಿರಿಗೌಡ ಕಾಗೆ, ವಿರೂಪಾಕ್ಷ ಹುಲ್ಲೋಳಿ, ಉದಯ ಪಾಟೀಲ, ಸತ್ಯಪ್ಪ ಕಾಗವಾಡೆ, ಅಶೋಕ್ ನಾಂದಣಿ, ಗಜಾನನ ಕಾಗೆ ಸೇರಿದಂತೆ ಅನೇಕರು ಸಹಕರಿಸಿದರು. ಶಶಿಕಾಂತ ಭೈರಗೊಂಡ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
