Bagalkot

ಬಾಗಲಕೋಟೆಯಲ್ಲಿ ಸಿಎಂ ಟೆಂಪಲ್ ರನ್: ಗ್ರಾಮದೇವತೆ ಹಾಗೂ ಕೊತ್ತಲೇಶ್ವರನ ಆಶೀರ್ವಾದ ಪಡೆದ ಮುಖ್ಯಮಂತ್ರಿ!

Share

ಚುನಾವಣಾ ಕಣದ ಬಿರುಸಿನ ಪ್ರಚಾರದ ನಡುವೆಯೂ ಮುಖ್ಯಮಂತ್ರಿಗಳು ಇಂದು ಬಾಗಲಕೋಟೆಯಲ್ಲಿ ದೈವದ ಮೊರೆ ಹೋಗಿದ್ದಾರೆ. ನಗರದ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡಿದ ಸಿಎಂ, ವಿಶೇಷ ಪೂಜೆ ಸಲ್ಲಿಸಿ ವಿಜಯದ ಹಾರೈಕೆಗಾಗಿ ಪ್ರಾರ್ಥಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದ ಅಬ್ಬರದ ನಡುವೆಯೇ ಮುಖ್ಯಮಂತ್ರಿಗಳು ಇಂದು ‘ಟೆಂಪಲ್ ರನ್’ ನಡೆಸುವ ಮೂಲಕ ಗಮನ ಸೆಳೆದರು. ನಗರದ ಶಕ್ತಿ ದೇವತೆಗಳಾದ ದ್ಯಾಮವ್ವ ಹಾಗೂ ದುರಗಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ವಿಶೇಷ ಮಂಗಳಾರತಿ ಪೂಜೆಯಲ್ಲಿ ಪಾಲ್ಗೊಂಡರು. ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದ ಮುಖ್ಯಮಂತ್ರಿಗಳಿಗೆ ದೇಗುಲದ ಅರ್ಚಕರು ಹಣೆಗೆ ಕುಂಕುಮ ಇಟ್ಟು, ಶಾಲು ಹೊದಿಸಿ ಮಂತ್ರಘೋಷಗಳೊಂದಿಗೆ ಆಶೀರ್ವದಿಸಿದರು. ಚುನಾವಣಾ ಜಂಜಾಟದ ಮಧ್ಯೆಯೂ ಸಿಎಂ ಅವರ ಈ ದೈವಭಕ್ತಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ಗ್ರಾಮದೇವತೆಗಳ ದರ್ಶನದ ಬಳಿಕ ಮುಖ್ಯಮಂತ್ರಿಗಳು ನಗರದ ಐತಿಹಾಸಿಕ ಕೊತ್ತಲೇಶ್ವರ ದೇವಸ್ಥಾನಕ್ಕೆ ತೆರಳಿ ಮಹಾರುದ್ರಾಭಿಷೇಕ ಮತ್ತು ಮಂಗಳಾರತಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಸೇರಿದಂತೆ ಹಿರಿಯ ನಾಯಕರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು. ದೇವಸ್ಥಾನದ ಆವರಣದಲ್ಲಿ ಸಿಎಂ ಅವರಿಗೆ ಹಾರ ಹಾಕಿ ಸನ್ಮಾನಿಸಿದ ಅರ್ಚಕರು, ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಶುಭ ಹಾರೈಸಿದರು.

Tags:

error: Content is protected !!