BELAGAVI

ಓಲಿವ್ ಗ್ರೀನ್ಸ್ ಗಾಲ್ಫ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ‘ಕ್ಲೌಡ್ 9 ಟೈಗರ್ಸ್’: ಬೆಳಗಾವಿಯಲ್ಲಿ ಮುಕ್ತಾಯಗೊಂಡ ಗಾಲ್ಫ್ ಹಬ್ಬ; ವಿಜೇತರಿಗೆ ಪಾರಿತೋತಕ ವಿತರಣೆ

Share

ಬೆಳಗಾವಿಯ ಕ್ರೀಡಾ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿದ್ದ ಚೊಚ್ಚಲ ‘ಓಲಿವ್ ಗ್ರೀನ್ಸ್ ಗಾಲ್ಫ್ ಲೀಗ್’ ಸಂಭ್ರಮದ ಸಮಾರೋಪ ಕಂಡಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ‘ಕ್ಲೌಡ್ 9 ಟೈಗರ್ಸ್’ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಬೆಳಗಾವಿಯ ಓಲಿವ್ ಗ್ರೀನ್ಸ್ ಗಾಲ್ಫ್ ಮೈದಾನದಲ್ಲಿ ನಡೆದ ಈ ಪ್ರತಿಷ್ಠಿತ ಲೀಗ್‌ನ ಫೈನಲ್’ನಲ್ಲಿ ಡಾ. ಅರುಣ್ ಕಿಲ್ಲೇಕರ್ ಒಡೆತನದ ‘ಕ್ಲೌಡ್ 9 ಟೈಗರ್ಸ್’ ತಂಡವು ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ರಾಜೇಶ್ ಕಾಂಬಳೆ ಅವರ ‘ರಾಯಲ್ ಕಿಂಗ್ಸ್’ ತಂಡವು ಪ್ರಥಮ ರನ್ನರ್ ಅಪ್ ಸ್ಥಾನ ಪಡೆದರೆ, ಕರ್ನಲ್ ಮೋಹನ್ ನಾಯಕ್ ಮತ್ತು ಅಭಯ್ ಕುಲಕರ್ಣಿ ಅವರ ‘ದಿ ಮಾಸ್ಟರ್ಸ್’ ತಂಡವು ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಮಾರ್ಚ್ 13 ರಂದು ನಡೆದ ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಆಟಗಾರರು ಎಂಟು ಫ್ರಾಂಚೈಸಿ ತಂಡಗಳ ಪರವಾಗಿ ಕಣಕ್ಕಿಳಿದಿದ್ದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಿಗೆಡಿಯರ್ ಜಾಯ್‌ದೀಪ್ ಮುಖರ್ಜಿ ಹಾಗೂ ಕರ್ನಲ್ ಎಚ್.ಯು. ಮರಾಠೆ ಅವರು ವಿಜೇತರಿಗೆ ಪಾರಿತೋಷಕಗಳನ್ನು ಮತ್ತು ನಗದು ಬಹುಮಾನವನ್ನು ವಿತರಿಸಿದರು. ಲೀಗ್‌ನ ಅತ್ಯಂತ ಮೌಲ್ಯಯುತ ಆಟಗಾರರಾಗಿ (MVP) ಬಸವರಾಜ್ ಪವಾರ್, ದೇವಿಕಾ ಕಾಂಬಳೆ ಮತ್ತು ಕರ್ನಲ್ ನಾರಾಯಣ್ ಸಿಂಗ್ ಭಟ್ಟಿ ಮಿಂಚಿದರು. ಈ ಲೀಗ್‌ನಲ್ಲಿ ಮಿಹಿರ್ ಪೋತದಾರ್ XI (ಮಿಹಿರ್ ಪೋತದಾರ್), ಡೈನಾಮಿಕ್ ಸಿಲ್ವರ್‌ಬಿಲ್ಸ್ ಸ್ಟಾರ್ (ಶೈರ್ಶೈಲ್ ಖೋತ್), SBG ವಾರಿಯರ್ಸ್ (ರಾಜ್ ಘಾಟ್ಗೆ), ಯುನಿವರ್ಸಲ್ ಈಗಲ್ಸ್ (ಆದರ್ಶ ಗುಲಬಾನಿ ಮತ್ತು ಸುಮುಖ್ ಛಾಬ್ರಿಯಾ) ಹಾಗೂ ಆದಿತ್ಯ ಎಲೈಟ್ ಚಾಂಪಿಯನ್ಸ್ (ಸಚಿನ್ ಉಸಲ್ಕರ್) ತಂಡಗಳು ಸಕ್ರಿಯವಾಗಿ ಭಾಗವಹಿಸಿದ್ದವು.

ಬೆಳಗಾವಿಯ ಗಾಲ್ಫ್ ಆಟಗಾರರಿಗೆ ಒಂದು ಭವ್ಯ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಲೀಗ್ ಆರಂಭಿಸಲಾಗಿತ್ತು. ಪುರುಷ ಮತ್ತು ಮಹಿಳಾ ಗಾಲ್ಫ್ ಆಟಗಾರರು ಒಟ್ಟಾಗಿ ಸ್ಪರ್ಧಿಸಿದ್ದು ಈ ಲೀಗ್‌ನ ವಿಶೇಷತೆಯಾಗಿತ್ತು. ವಿವಿಧ ಫಾರ್ಮ್ಯಾಟ್‌ಗಳಲ್ಲಿ ನಡೆದ ಪಂದ್ಯಗಳು ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ತುಂಬಿವೆ. ಬೆಳಗಾವಿಯ ಗಾಲ್ಫ್ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಈ ಕ್ರೀಡೆ ಬೆಳೆಯಲು ಇದು ಸಹಕಾರಿಯಾಗಲಿದೆ ಎಂದು ಸಂಘಟಕರು ಹರ್ಷ ವ್ಯಕ್ತಪಡಿಸಿದರು.

Tags:

error: Content is protected !!