ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಿದ್ದು, ಬೆಳಗಾವಿಯಲ್ಲೂ ಕೂಡ ಪರೀಕ್ಷಾ ಪರ್ವ ಶುರುವಾಗಿದೆ. ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸ್ತ್ರಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಪರೀಕ್ಷಾ ಕೇಂದ್ರಗಳ ಮುಂದೆ ಹದ್ದಿನ ಕಣ್ಣು ಇಡಲಾಗಿದೆ.


ಬೆಳಗಾವಿ ಜಿಲ್ಲೆಯ ಒಟ್ಟು 18 ಕೇಂದ್ರಗಳಲ್ಲಿ ಇಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಆರಂಭಗೊಂಡಿದೆ. ಒಟ್ಟು 7,942 ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸುತ್ತಿದ್ದು, ಮೊದಲ ಬಾರಿಗೆ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿರುವುದರಿಂದ ಪರೀಕ್ಷಾ ಕೇಂದ್ರಗಳ ಗೇಟ್ ಬಳಿಯೇ ವಿದ್ಯಾರ್ಥಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಅರ್ಧ ತೋಳಿನ ಶರ್ಟ್, ಸರಳ ಪ್ಯಾಂಟ್ ಧರಿಸಲು ಸೂಚಿಸಲಾಗಿದ್ದು, ಕಸೂತಿ ಇರುವ ಬಟ್ಟೆ, ಜಿಪ್ ಪ್ಯಾಂಟ್ ಹಾಗೂ ಶೂ ಧರಿಸಲು ನಿರ್ಬಂಧ ಹೇರಲಾಗಿದೆ. ಆಭರಣಗಳಿಗೂ ನಿಷೇಧ ಹೇರಲಾದ ಹಿನ್ನೆಲೆ, ಕಿವಿಯೋಲೆ ಮತ್ತು ಮೂಗಿನ ನತ್ತು ಧರಿಸಿದ್ದ ವಿದ್ಯಾರ್ಥಿನಿಯರಿಗೆ ಸಿಬ್ಬಂದಿಗಳು ಅಂಟಿನ ಟೇಪ್ ಹಚ್ಚುತ್ತಿರುವ ದೃಶ್ಯಗಳು ಕಂಡುಬಂದವು.
ಪರೀಕ್ಷಾ ಕೇಂದ್ರಗಳ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಬುರ್ಕಾ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಿಬ್ಬಂದಿಗಳು ಸೂಚನೆ ನೀಡಿ, ಬುರ್ಖಾವನ್ನು ತೆಗೆಯಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಿದರು. ಕೆಎಲ್ಇ ಲಿಂಗರಾಜ್ ಕಾಲೇಜು, ಭರತೇಶ, ಗೋಮಟೇಶ ಮತ್ತು ಜ್ಯೋತಿ ಪಿಯು ಕಾಲೇಜು ಸೇರಿದಂತೆ ನಗರದ ಪ್ರಮುಖ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಂದು ಬೆಳಿಗ್ಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆಗಳು ನಡೆಯುತ್ತಿದ್ದು, ಯಾವುದೇ ಅವ್ಯವಹಾರ ನಡೆಯದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
