ಬೆಳಗಾವಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತರು ಖಡಕ್ ಕ್ರಮ ಕೈಗೊಂಡಿದ್ದಾರೆ. ಗಾಂಜಾ ಮಾರಾಟ ಹಾಗೂ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ನಿಯಂತ್ರಣ ಮತ್ತು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಕ್ರಿಮಿನಲ್ಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮುಂದಾಗಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಐವರು ರೂಢಿಗತ ಆರೋಪಿಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55 ಮತ್ತು 56 ರ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಆರೋಪಿಗಳು ಕೊಲೆ, ಕೊಲೆ ಯತ್ನ ಹಾಗೂ ಮಾದಕ ವಸ್ತು ಮಾರಾಟದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಗಡಿಪಾರಾದವರಲ್ಲಿ ಹಲಗಾ ಗ್ರಾಮದ ಪಿರಾಜಿ ಯಲ್ಲಪ್ಪ ಯಸೂಚಿ, ತಿಲಕವಾಡಿಯ ಯಶ್ ಗಣೇಶ ದಾವಲೆ ಹಾಗೂ ಅದಿತ್ಯ ಗಣೇಶ ದಾವಲೆ, ಪಾರ್ವತಿ ನಗರದ ಸಂತೋಷ ಗೋವಿಂದ ದಿವಟಗಿ ಮತ್ತು ಮಚ್ಚೆ ಗ್ರಾಮದ ರಫೀಕ ಮಹ್ಮದ ರಫೀಕ ಇಸ್ತಿಯಾಕ ಶೇಖ ಸೇರಿದ್ದಾರೆ. ಪಿರಾಜಿ, ಯಶ್, ಅದಿತ್ಯ ಮತ್ತು ಸಂತೋಷ್ ಅವರನ್ನು ಆರು ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿದ್ದರೆ, ರಫೀಕ್ ಶೇಖ್ನನ್ನು ಮೂರು ತಿಂಗಳ ಅವಧಿಗೆ ಜಿಲ್ಲೆಯಿಂದ ಹೊರಹಾಕಲಾಗಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
