ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಹೈವೋಲ್ಟೇಜ್ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ. ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತಿದ್ದು, ಅಖಾಡದಲ್ಲಿರುವ 9 ಕಲಿಗಳ ಭವಿಷ್ಯ ಇಂದು ಇವಿಎಂ ಯಂತ್ರ ಸೇರಲಿದೆ.


ಬಾಗಲಕೋಟೆ ಜಿಲ್ಲೆಯ ರಾಜಕೀಯ ಕುತೂಹಲ ಕೆರಳಿಸಿರುವ ಬಾಗಲಕೋಟೆ ಉಪಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಿರುವ ಈ ಉಪಸಮರದಲ್ಲಿ ಒಟ್ಟು 9 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇಕಡಾ 11.89 ರಷ್ಟು ಮತದಾನ ದಾಖಲಾಗಿದ್ದು, ಬಿಸಿಲಿನ ತಾಪ ಏರುವ ಮುನ್ನವೇ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರು ನಗರದ ಮಾದರಿ ಪ್ರಾಥಮಿಕ ಶಾಲೆ ನಂ. 4ರ ಮತಗಟ್ಟೆ ಸಂಖ್ಯೆ 166ರಲ್ಲಿ ಮತದಾನ ಮಾಡಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ತಮ್ಮ ಸ್ವಗ್ರಾಮ ತಿಮ್ಮಾಪೂರದ ಬೂತ್ ಸಂಖ್ಯೆ 39ರಲ್ಲಿ ಮತ ಚಲಾಯಿಸಲಿದ್ದಾರೆ. ಈಗಾಗಲೇ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿ, ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿರಿಯರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದು ವಿಶೇಷವಾಗಿದೆ.

ಕ್ಷೇತ್ರದಾದ್ಯಂತ ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 2,59,797 ಮತದಾರರು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಚುನಾವಣಾ ಅಕ್ರಮ ತಡೆಯಲು ಪ್ರತಿ ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 2500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಪೊಲೀಸ್ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ವಿಶೇಷವಾಗಿ ಪಿಂಕ್ ಬೂತ್ ಹಾಗೂ ವಿಕಲಚೇತನರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ನಿರ್ಮಿಸುವ ಮೂಲಕ ಸುಗಮ ಮತದಾನಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
