1. ಬೆಳಗಾವಿ ಎಸ್‌ಪಿ ಕಚೇರಿಗೆ ರಕ್ಷಣೆ ಕೋರಿ ಬಂದ ಪ್ರೇಮಿಗಳು
2. ಜಾತಿ ಬೇರೆ ಪ್ರೀತಿ ಒಂದೇ ಎಂದ ನವಜೋಡಿ
3. ಗೃಹಬಂಧನದಿಂದ ತಪ್ಪಿಸಿಕೊಂಡು ಬಂದ ವಿಮಲಾ ಭೋವಿ
4. ಪೋಷಕರ ವಿರೋಧದ ನಡುವೆ ಮದುವೆಯಾದ ಜೋಡಿ

ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಜೋಡಿಯೊಂದು ಇಂದು ರಕ್ಷಣೆ ಕೋರಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದೆ. ನಮ್ಮ ಜಾತಿ ಬೇರೆಯಾದರೂ ಪ್ರೀತಿ ಒಂದೇ ಎಂದು ದೇವಸ್ಥಾನದಲ್ಲಿ ಮದುವೆಯಾಗಿರುವ ಈ ಜೋಡಿಗೆ ಈಗ ಜೀವಭಯ ಎದುರಾಗಿದೆ.
ಗೋಕಾಕ್ ಫಾಲ್ಸ್ ನಿವಾಸಿಗಳಾದ ಶಿವಪ್ಪ ಮೂಕಗೋಳ ಮತ್ತು ವಿಮಲಾ ಭೋವಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಮನೆಯವರಿಗೆ ತಿಳಿಯದಂತೆ ದೇವಸ್ಥಾನದಲ್ಲಿ ಹಸೆಮಣೆ ಏರಿದ್ದಾರೆ. ಆದರೆ ವಿವಾಹದ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ವಿಮಲಾಳನ್ನು ಆಕೆಯ ಪೋಷಕರು ಮನೆಯಲ್ಲಿ ಗೃಹಬಂಧನದಲ್ಲಿರಿಸಿದ್ದರು ಎನ್ನಲಾಗಿದೆ. ಇಂದು ಪೋಷಕರ ಕಣ್ಣು ತಪ್ಪಿಸಿ ಎಸ್‌ಪಿ ಕಚೇರಿಗೆ ಆಗಮಿಸಿದ ಜೋಡಿ, ತಮಗೆ ರಕ್ಷಣೆ ನೀಡುವಂತೆ ಶಿವಪ್ಪ ಮೂಕಗೋಳ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಮಲಾ, “ನಾನು ಬಿ.ಎ. ಮೊದಲ ವರ್ಷದಲ್ಲಿ ಓದುತ್ತಿದ್ದು, ನಮ್ಮ ಮನೆಯಲ್ಲಿ ಶಿವಪ್ಪನನ್ನು ಇಷ್ಟಪಡುತ್ತಿಲ್ಲ. ನಮ್ಮ ಮದುವೆಗೆ ಶಿವಪ್ಪನ ಮನೆಯಲ್ಲಿ ಒಪ್ಪಿಗೆ ಇದೆ. ನನ್ನನ್ನು ಮನೆಯಿಂದ ಹೊರಗೆ ಬಿಡದೆ ಕೂಡಿ ಹಾಕಿದ್ದರು, ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ” ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ನವಜೋಡಿ, ತಮ್ಮ ಸುಂದರ ಬದುಕಿಗೆ ಮನೆಯವರಿಂದ ಅಡ್ಡಿಯಾಗದಂತೆ ಪೊಲೀಸ್ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
