ಬೆಳಗಾವಿ: ಕಣ್ಣೀರಿಡುತ್ತಲೇ ಬೆಳೆ ನಾಶಪಡಿಸಿದ ರೈತ

ಬೆಲೆ ಕುಸಿತಕ್ಕೆ ಬಲಿಯಾದ ಅಪ್ಪಾಸಾಹೇಬ ದೇಸಾಯಿ
ಸಾಲ ಮಾಡಿ ಬೆಳೆದ ಬೆಳೆ ಈಗ ಮಣ್ಣು ಪಾಲು
ಸರಕಾರದ ವಿರುದ್ಧ ಕಡೋಲಿ ಗ್ರಾಮದ ರೈತರ ಆಕ್ರೋಶ
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಕ್ಯಾಬೇಜ್ ಬೆಲೆ ದಿಢೀರ್ ಕುಸಿತ ಕಂಡ ಹಿನ್ನೆಲೆ ರೈತನೊಬ್ಬ ತಾನು ಬೆಳೆದಿದ್ದ ಸಂಪೂರ್ಣ ಬೆಳೆನ್ನೇ ಟ್ರ್ಯಾಕ್ಟರ್ ಹಚ್ಚಿ ನಾಶಪಡಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಕಡೋಲಿ ಗ್ರಾಮದ ರೈತ ಅಪ್ಪಾಸಾಹೇಬ ದೇಸಾಯಿ ಅವರು ಸಾಲಸೂಲ ಮಾಡಿಕೊಂಡು, ಹೆಚ್ಚಿನ ನಿರೀಕ್ಷೆಯೊಂದಿಗೆ ತಮ್ಮ ಎರಡು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆ ಬೆಳೆದಿದ್ದರು. ಬೀಜ, ರಾಸಾಯನಿಕ ಗೊಬ್ಬರ, ನೀರಾವರಿ, ಕೂಲಿ ಕಾರ್ಮಿಕರ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಹೂಡಿಕೆ ಮಾಡಿ ಬೆಳೆ ಬೆಳೆಸಿದ್ದರು. ಬೆಳೆ ಚೆನ್ನಾಗಿ ಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ ಕುಟುಂಬ ಕಾದು ಕುಳಿತಿತ್ತು.
ಆದರೆ ಮಾರುಕಟ್ಟೆಯಲ್ಲಿ ದಿಢೀರ್ ಕ್ಯಾಬೇಜ್ ಬೆಲೆ ಭಾರೀ ಕುಸಿತ ಕಂಡಿದ್ದು ರೈತನಿಗೆ ಭಾರೀ ಆಘಾತ ತಂದಿದೆ. ಬೆಳೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲು ಖರ್ಚು ಮಾಡಿದರೂ ಖರ್ಚೇ ವಾಪಸು ಬರದ ಸ್ಥಿತಿ ಉಂಟಾಗಿದೆ. ಇದರಿಂದ ಬೇಸತ್ತ ರೈತ, ಬೆಳೆ ಮಾರಾಟ ಮಾಡುವುದಕ್ಕಿಂತ ನಾಶಪಡಿಸುವುದೇ ಒಳಿತು ಎಂದು ತೀರ್ಮಾನಿಸಿ ಟ್ರ್ಯಾಕ್ಟರ್ ಹಚ್ಚಿ ಸಂಪೂರ್ಣ ಬೆಳೆ ಹೊಲದಲ್ಲೇ ನಾಶಪಡಿಸಿದ್ದಾರೆ.
ಇದಲ್ಲದೆ ತರಕಾರಿ ಬೆಳೆಗಳಿಗೆ ಸರಕಾರದಿಂದ ಯಾವುದೇ ಬೆಂಬಲ ಬೆಲೆ ಘೋಷಣೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಲೆ ಸ್ಥಿರತೆ ಇಲ್ಲದಿರುವುದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದು, ಸಾಲದ ಭಾರದಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಘಟನೆಯ ಬಳಿಕ ರೈತ ಅಪ್ಪಾಸಾಹೇಬ ದೇಸಾಯಿ ಅವರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ನಾವು ದುಡಿದ ಶ್ರಮಕ್ಕೆ ಬೆಲೆ ಇಲ್ಲ, ಬೆಳೆ ಬೆಳೆದರೂ ನಷ್ಟವೇ” ಎಂದು ಬೇಸರ ಹೊರಹಾಕಿದ್ದಾರೆ.
ಈ ಘಟನೆ ಉತ್ತರ ಕರ್ನಾಟಕದಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಮಾರುಕಟ್ಟೆ ನಿಯಂತ್ರಣ ಹಾಗೂ ರೈತರಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
