ಕುಂದಾನಗರಿಯಲ್ಲಿ ರಸ್ತೆಗಿಳಿದ ಯಮಧರ್ಮರಾಯ!??
ಬೈಕರ್ಸ್‌ಗಳಿಂದ ವಿನೂತನ ಸಂಚಾರಿ ಜಾಗೃತಿ
ಬೈಕಿಂಗ್ ಬ್ರದರ್‌ಹುಡ್ ತಂಡದಿಂದ ವಿಶಿಷ್ಟ ರ್ಯಾಗಲಿ
ಸಂಚಾರಿ ಪೊಲೀಸರ ಸಹಯೋಗದಲ್ಲಿ ಜಾಗೃತಿ ಅಭಿಯಾನ

ಬೆಳಗಾವಿ ನಗರದ ರಸ್ತೆಗಳಲ್ಲಿ ಇಂದು ಯಮಧರ್ಮರಾಯ ಪ್ರತ್ಯಕ್ಷನಾಗಿದ್ದ! ಗಾಬರಿಯಾಗಬೇಡಿ, ಇದು ಬೈಕಿಂಗ್ ಬ್ರದರ್‌ಹುಡ್ ಬೆಳಗಾವಿ ತಂಡ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಜಾಗೃತಿ ರ್ಯಾಡಲಿ. ಹೆಲ್ಮೆಟ್ ಧರಿಸದ ಸವಾರರಿಗೆ ಯಮರಾಜನ ಮೂಲಕ ಪ್ರಾಣಾಪಾಯದ ಎಚ್ಚರಿಕೆ ನೀಡುವ ಮೂಲಕ ಈ ತಂಡ ಸಾರ್ವಜನಿಕರ ಗಮನ ಸೆಳೆದಿದೆ.
ಸುರಕ್ಷಿತ ಚಾಲನೆ ಮತ್ತು ಸಂಚಾರಿ ನಿಯಮಗಳ ಪಾಲನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ಬೈಕಿಂಗ್ ಬ್ರದರ್‌ಹುಡ್ ಬೆಳಗಾವಿ’ ತಂಡವು ನಗರದಲ್ಲಿ ಭರ್ಜರಿ ಬೈಕ್ ರ್ಯಾಾಲಿ ಆಯೋಜಿಸಿತ್ತು. ಸಿದ್ದಾಂತ್ ಪಾಟೀಲ್, ಪ್ರವೀಣ್ ಕುಲಕರ್ಣಿ ಸೇರಿದಂತೆ ತಂಡದ ಪ್ರಮುಖ ಸದಸ್ಯರು ಪಾಲ್ಗೊಂಡಿದ್ದ ಈ ರ್ಯಾಜಲಿಯಲ್ಲಿ, ಝೇವಿಯರ್ ಅವರು ಧರಿಸಿದ್ದ ‘ಯಮರಾಜ’ನ ವೇಷ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. “ಹೆಲ್ಮೆಟ್ ಇಲ್ಲದಿದ್ದರೆ ರೈಡ್ ಇಲ್ಲ” ಎಂಬ ಖಡಕ್ ಸಂದೇಶ ನೀಡಿದ ಯಮರಾಜನ ಪಾತ್ರದ ಮೂಲಕ, ರಸ್ತೆ ಶಿಸ್ತು ಉಲ್ಲಂಘಿಸಿದರೆ ಸಾವು ಬೆನ್ನಿಗಿರುತ್ತದೆ ಎಂಬ ಗಂಭೀರ ಸತ್ಯವನ್ನು ಸವಾರರಿಗೆ ಮನವರಿಕೆ ಮಾಡಿಕೊಡಲಾಯಿತು. ಸಂಚಾರಿ ಪೊಲೀಸರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಮನವಿ ಮಾಡಲಾಯಿತು.
