ಬಾಗಲಕೋಟೆ ಲೋಕಸಭಾ ಕಣದಲ್ಲಿ ಈಗ ನಾಯಕರ ಪ್ರತಿಷ್ಠೆಯ ಜಿದ್ದಾಜಿದ್ದಿ ಶುರುವಾಗಿದೆ. ಒಂದೆಡೆ ಬಿಜೆಪಿಯಲ್ಲಿನ ‘ಟಗರು’ಗಳ ಗುದ್ದಾಟ ಕಾರ್ಯಕರ್ತರನ್ನು ಕಂಗಾಲಾಗಿಸಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅತಿದೊಡ್ಡ ಸಮುದಾಯವನ್ನು ಸೆಳೆಯಲು ರೆಸಾರ್ಟ್ ಪಾಲಿಟಿಕ್ಸ್ ಆರಂಭಿಸಿದೆ.


ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಂತಿದೆ. ಕಳೆದ ಆರು ದಿನಗಳಿಂದ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಅವರ ಟೀಕೆಗಳಿಂದ ಅಸಮಾಧಾನಗೊಂಡಿರುವ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರದಿಂದ ಸಂಪೂರ್ಣ ಹಿಂದೆ ಸರಿದಿದ್ದಾರೆ. ಜಿಲ್ಲೆಗೆ ಮರಳದ ವಿಜಯೇಂದ್ರ ಅವರ ನಡೆ ಈಗ ಕಾರ್ಯಕರ್ತರಲ್ಲಿ ಭಾರೀ ಗೊಂದಲ ಮೂಡಿಸಿದ್ದು, ನಾಯಕರ ಈ ಗುದ್ದಾಟವು ಪರೋಕ್ಷವಾಗಿ ಕಾಂಗ್ರೆಸ್ಗೆ ಲಾಭ ಮಾಡಿಕೊಡುವ ಮುನ್ಸೂಚನೆ ನೀಡುತ್ತಿದೆ. ಸ್ವಪಕ್ಷೀಯ ನಾಯಕರ ಈ ಮುನಿಸು ಈಗ ಕೇಸರಿ ಪಾಳಯಕ್ಕೆ ನಡುಕ ಹುಟ್ಟಿಸಿದೆ.

ಇತ್ತ ಬಿಜೆಪಿಯ ಆಂತರಿಕ ಭಿನ್ನಮತವನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಂಠಿ ರೆಸಾರ್ಟ್ನಲ್ಲಿ ಪಂಚಮಸಾಲಿ ಮತ್ತು ವೀರಶೈವ ಲಿಂಗಾಯತ ಸಮುದಾಯದ ಪ್ರಬಲ ನಾಯಕರೊಂದಿಗೆ ಸಿದ್ದರಾಮಯ್ಯ ಹೈವೋಲ್ಟೇಜ್ ಸಭೆ ನಡೆಸುತ್ತಿದ್ದು, ಸಮುದಾಯದ ಮತಗಳನ್ನು ಸೆಳೆಯಲು ಬಿಗಿ ಪ್ಲ್ಯಾನ್ ರೂಪಿಸಿದ್ದಾರೆ. ಉಮೇಶ್ ಮೇಟಿ ಪರವಾಗಿ ಸಚಿವರ ಒಳಹೊಡೆತ ಮತ್ತು ಲಿಂಗಾಯತ ಮತಗಳ ಕ್ರೂಢೀಕರಣದ ತಂತ್ರಗಾರಿಕೆಯು ಬಿಜೆಪಿಯ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ಸಾಧ್ಯತೆ ದಟ್ಟವಾಗಿದೆ.
