• ನಯಾನಗರ ಸಿದ್ಧ ಸುಕ್ಷೇತ್ರದಲ್ಲಿ ಜಾತ್ರಾ ಸಂಭ್ರಮ
• ಏಪ್ರಿಲ್ 16ಕ್ಕೆ ಅದ್ಧೂರಿ ಸಾಮೂಹಿಕ ವಿವಾಹ
• ಅಭಿನವ ಸಿದ್ಧಲಿಂಗ ಶ್ರೀಗಳಿಂದ ಕಾಲಜ್ಞಾನ ಭವಿಷ್ಯ
• ರಾತ್ರಿ ಯುವಕರಿಂದ ಸಾಮಾಜಿಕ ನಾಟಕ ಪ್ರದರ್ಶನ

ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಸಿದ್ಧ ಸುಕ್ಷೇತ್ರದ ಸುಖದೇವಾನಂದ ಮಹಾಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಏ.16ರವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.
ನಿತ್ಯ ರಾತ್ರಿ 8ಕ್ಕೆ ವಿಶೇಷ ಪ್ರವಚನ, ಭಜನಾ ಕಾರ್ಯಕ್ರಮಗಳಿವೆ. ಏ.14ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಕಳಸಾರೋಹಣ ಮತ್ತು ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ. ಏ.15ರಂದು ಬೆಳಗ್ಗೆ ಸುಖದೇವಾನಂದ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಬೆಳಗ್ಗೆ 9ಕ್ಕೆ ಪೂರ್ಣಕುಂಭ ಹಾಗೂ ವಾದ್ಯ ಮೇಳಗಳೊಂದಿಗೆ ಮೆರವಣಿಗೆ, 11ಕ್ಕೆ ಜಾನುವಾರು ಪ್ರದರ್ಶನ, ಸಂಜೆ 7ಕ್ಕೆ ವಿವಿಧ ಮಠಾಧೀಶರಿಂದ ಪ್ರವಚನ, ಮಠದ ಮಠಾಧೀಶ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿಯವರ ತುಲಾಭಾರ, ಕಿರೀಟ ಪೂಜೆ ನಡೆಯಲಿದೆ.
ಏ.16ರಂದು ಬೆಳಗ್ಗೆ ಸುಖದೇವಾನಂದ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ, ನಂತರ ವಾದ್ಯ ಮೇಳಗಳೊಂದಿಗೆ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಸಂಚರಿಸುವುದು. ಬಳಿಕ ಸಂಜೆ 5ಕ್ಕೆ ಕಿಚ್ಚ ದಾಟುವ ಅಭಿನವ ಸಿದ್ಧಲಿಂಗ ಶ್ರೀಗಳು ಸಿದ್ಧರ ವರ್ಷದ ಕಾಲಜ್ಞಾನ ನುಡಿಗಳನ್ನು ಹೇಳುವರು. ರಾತ್ರಿ ಗ್ರಾಮದ ಯುವಕರಿಂದ ‘ಒಡಲಿನ ತಾಪ ಬಿಡಲಿಲ್ಲ ಶಾಪ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
