Khanapur

ಖಾನಾಪುರದಲ್ಲಿ ಚಾಕು ಇರಿದು ಕೊಲೆಗೆ ಯತ್ನ

Share

ಖಾನಾಪುರ ನಗರದ ವಿದ್ಯಾನಗರದಲ್ಲಿ ಸಣ್ಣ ವಿಷಯಕ್ಕೆ ಶುರುವಾದ ಕಿರಿಕ್, ರಕ್ತಪಾತದಲ್ಲಿ ಅಂತ್ಯವಾಗಿದೆ. ಮಾತು ಮುಂದುವರಿದು ವಿಕೋಪಕ್ಕೆ ತಿರುಗಿದ ಪರಿಣಾಮ, ಯುವಕನೋರ್ವನ ಮೇಲೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಲಾಗಿದೆ. ಈ ಸಂಬಂಧ ಖಾನಾಪುರ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ದೂರುದಾರ ಶ್ರೇಯಸ್ ಧನಂಜಯ ದೇಸಾಯಿ ಅವರಿಗೆ ಆರೋಪಿ ಋಷಾಂತ್ ರಾಜೇಶ್ ಪೂಜಾರಿ ಕಳೆದ ಒಂದು ತಿಂಗಳಿನಿಂದ ಮದುವೆ ರದ್ದಾದ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದನು. ಇದೇ ವಿಚಾರವಾಗಿ ಸಂಧಾನಕ್ಕೆಂದು ಏಪ್ರಿಲ್ 11ರ ಸಂಜೆ 7 ಗಂಟೆಗೆ ವಿದ್ಯಾನಗರದ ಜುಂಜವಾಡ್ಕರ್ ಅವರ ಮನೆಯ ಬಳಿ ಬರಲು ಶ್ರೇಯಸ್‌ಗೆ ಆರೋಪಿ ತಿಳಿಸಿದ್ದನು. ಅದರಂತೆ ಶ್ರೇಯಸ್ ತನ್ನ ಸ್ನೇಹಿತರಾದ ಆದರ್ಶ ನಾಗರಾಜ ಕೊಲೇಕರ್ ಹಾಗೂ ಇತರರೊಂದಿಗೆ ಅಲ್ಲಿಗೆ ತೆರಳಿದಾಗ, ಆರೋಪಿ ಋಷಾಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ತೆಗೆದಿದ್ದಾನೆ.

ಜಗಳ ಬಿಡಿಸಲು ಮಧ್ಯಸ್ಥಿಕೆ ವಹಿಸಿದ ಆದರ್ಶ ನಾಗರಾಜ ಕೊಲೇಕರ್ ಮೇಲೆ ಕೆರಳಿದ ಆರೋಪಿ, ತಾನು ತಂದಿದ್ದ ಚಾಕುವಿನಿಂದ ಆದರ್ಶ ಅವರ ಎದೆ, ಕುತ್ತಿಗೆ ಹಾಗೂ ಕೈ ಮೇಲೆ ಗಂಭೀರವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಆದರ್ಶ ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಖಾನಾಪುರ ಪೊಲೀಸರು ಬಿಎನ್ಎಸ್ (BNS) ಕಲಂ ಅಡಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಋಷಾಂತ್ ಪೂಜಾರಿ ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಖಾನಾಪುರದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Tags:

error: Content is protected !!