ವಿಶ್ವವಿಖ್ಯಾತ ಹಳೆಯ ಮಾಸ್ಟರ್ ಕಲಾವಿದರ ಕಲಾಕೃತಿಗಳಿಗೆ ಸಮಕಾಲೀನ ಸ್ಪರ್ಶ ನೀಡುವ ಅಪರೂಪದ “ಮಾಸ್ಟರ್ಸ್ ರೀಇಮ್ಯಾಜಿನ್ಡ್” ಚಿತ್ರಕಲಾ ಪ್ರದರ್ಶನ ಬೆಳಗಾವಿಯ ತಿಲಕವಾಡಿಯಲ್ಲಿ ಆರಂಭವಾಗಿದೆ. ಗುಲ್ಮೊಹರ್ ಬ್ಯಾಗ್ ಕಲಾವಿದರ ಈ ವಿಶಿಷ್ಟ ಕಲಾ ಪ್ರದರ್ಶನವು ಕಲಾಪ್ರೇಮಿಗಳ ಮನಸೂರೆಗೊಳ್ಳುತ್ತಿದೆ.

ಬೆಳಗಾವಿ: ನಗರದ ತಿಲಕವಾಡಿಯ ಹೇರವಾಡಕರ್ ಶಾಲೆ ಸಮೀಪದ ಕಲಾವಿಭೂತಿ ಕೆ.ಬಿ. ಕುಲಕರ್ಣಿ ಆರ್ಟ್ ಗ್ಯಾಲರಿಯಲ್ಲಿ ಗುಲ್ಮೊಹರ್ ಬ್ಯಾಗ್ ವತಿಯಿಂದ “ಮಾಸ್ಟರ್ಸ್ ರೀಇಮ್ಯಾಜಿನ್ಡ್” ಸಮೂಹ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಗೋವಾದ ಖ್ಯಾತ ಕಲಾವಿದ ಹಾಗೂ ಕಲಾ ವಿಮರ್ಶಕ ನಾಗೇಶ್ ರಾವ್ ಸಿರ್ದೇಸಾಯಿ, ಗೋವಾದ ಖ್ಯಾತ ಕಲಾವಿದ ದಾಮೋದರ್ ಮಾಡಗಾಂವ್ಕರ್ ಮತ್ತು ಬೆಳಗಾವಿಯ ಹೆಸರಾಂತ ವಾಸ್ತುಶಿಲ್ಪಿ ಶ್ರೇಯಸ್ ಪಾಟೀಲ್ ಅವರು ಈ ಪ್ರದರ್ಶನವನ್ನು ಉದ್ಘಾಟಿಸಿದರು. ಹಳೆಯ ಕಾಲದ ಮಾಸ್ಟರ್ ಪೇಂಟಿಂಗ್‌ಗಳನ್ನು ಇಂದಿನ ಆಧುನಿಕ ದೃಷ್ಟಿಕೋನದಲ್ಲಿ ಮರುಸೃಷ್ಟಿಸಿರುವುದು ಈ ಪ್ರದರ್ಶನದ ವಿಶೇಷತೆಯಾಗಿದೆ.

ಸುಮಾರು 10 ಮಾಸ್ಟರ್ಸ್’ಗಳನ್ನು ಈ ಬಾರಿ ಆಯ್ಕೆ ಮಾಡಲಾಗಿದ್ದು, ಅವರ ಚಿತ್ರಕಲೆಯನ್ನು ಅನುಕರಣೆ ಮಾಡಿ ಕಲಾಕೃತಿಗಳನ್ನು ತಯಾರಿಸಲಾಗಿದೆ. ಸುಮಾರು 30 ಕಲಾವಿದರು ಇದರಲ್ಲಿ ಭಾಗಿಯಾಗಿದ್ಧಾರೆ. ಅಕ್ರಾಲಿಕ್, ವಾಟರ್ ಕಲರ್, ಕೋಲಾಜ್, ಅಲ್ಕಾಹಾಲ್ ಪೇಂಟ್, ಇನ್ನುಳಿದ ಕಲರ್ ಮಾದರಿಗಳನ್ನು ಬಳಸಲಾಗಿದೆ. ಬೆಳಗಾವಿಗರು ಪ್ರದರ್ಶನಕ್ಕೆ ಭೇಟಿ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸುಷ್ಮಾ ಭಟ್ ಕರೆ ನೀಡಿದರು.
ಹಳೆಯ ಕಲಾವಿದರಾದ ರಾಜಾ ರವಿ ವರ್ಮಾ ಸೇರದಿಂತೆ ಇನ್ನುಳಿದವರ ಮಾದರಿಯನ್ನು ಅನುಸರಿಸಿ ಅವುಗಳ ಮೂಲಕ ಹೊಸ ಕಲಾಕೃತಿಗಳನ್ನು ತಯಾರಿಸಲಾಗಿದೆ. ಇದು ಜನಮನ್ನಣೆಗೆ ಪಾತ್ರವಾಗಿದೆ. ಪ್ರತಿದಿನ ಪ್ರದರ್ಶನವನ್ನು ನೋಡಲೂ ಜನರು ಆಗಮಿಸುತ್ತಿದ್ದಾರೆಂದು ಡಾ. ಸುಷ್ಮಾ ಪಾಟಣೇಕರ ಹೇಳಿದರು.

ಕಲಾವಿದರಾದ ಶಿರೀಷ್ ದೇಶಪಾಂಡೆ ಅವರು, ಗುಲಮೋಹರ್ ಬಾಗ್ ಗ್ರೂಪ್ ಮಾಸ್ಟರ್ಸ್ ರಿಇಮ್ಯಾಜಿನ್ ಎಂಬ ಕಾರ್ಯಕ್ರಮದಡಿ ಈ ಬಾರಿ ಹೊಸ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ತಮ್ಮ ನೆಚ್ಚಿನ ಕಲಾವಿದರ ಮಾದರಿಯನ್ನು ಬಳಸಿ ಚಿತ್ರಗಳನ್ನು ತಯಾರಿಸಲಾಗಿದೆ. ತಾವೂ ಬಾಲ್ ಪಾಯಿಂಟ್ ಪೆನ್ ಮೂಲಕ ಪಾಬ್ಲೋ ಪೀಕಾಸೋ ಅವರ ಚಿತ್ರವನ್ನು ತಯಾರಿಸಲಾಗಿದೆ. ಬೆಳಗಾವಿಗರು ಈ ಪ್ರದರ್ಶನಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದರು.
ಪ್ರದರ್ಶನದ ಅಂಗವಾಗಿ ಪ್ರತಿದಿನ ಸಂಜೆ 5 ಗಂಟೆಗೆ ವಿವಿಧ ಮಾಧ್ಯಮಗಳಲ್ಲಿ ಲೈವ್ ಪೇಂಟಿಂಗ್ ಡೆಮೊಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 13 ರಂದು ಸಚಿನ್ ಉಪಾಧ್ಯೆ (ಆಯಿಲ್ ಆನ್ ಕ್ಯಾನ್ವಾಸ್), ಏಪ್ರಿಲ್ 14 ರಂದು ಮಹೇಶ್ ಹೊನುಲೆ (ಜಲವರ್ಣ), ಏಪ್ರಿಲ್ 15 ರಂದು ಪದ್ಮಪ್ರಿಯಾ ಎಸ್ (ಆಲ್ಕೋಹಾಲ್ ಇಂಕ್ಸ್) ಹಾಗೂ ಏಪ್ರಿಲ್ 16 ರಂದು ಸುಶೀಲ್ ತರ್ಬಾರ್ (ಅಕ್ರಿಲಿಕ್ ಆನ್ ಕ್ಯಾನ್ವಾಸ್) ಅವರು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಕಲಾಕೃತಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
