ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಇಂದು 38ನೇ ದಿನಕ್ಕೆ ಕಾಲಿಟ್ಟಿದೆ. ಇದರ ನೇರ ಪರಿಣಾಮ ಈಗ ಭಾರತದ ಎಲ್‌ಪಿಜಿ ಬಳಕೆದಾರರ ಮೇಲೆ ಉಂಟಾಗುತ್ತಿದೆ. ಯುದ್ಧದಿಂದಾಗಿ ಎಲ್‌ಪಿಜಿ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಧಾರವಾಡದಲ್ಲಿ ಸೌದೆ ಹಾಗೂ ಕಟ್ಟಿಗೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.


ಹೌದು, ಎಲ್‌ಪಿಜಿ ಅಭಾವದಿಂದಾಗಿ ಈಗ ಧಾರವಾಡದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಸಾರ್ವಜನಿಕರು ಸೌದೆ ಒಲೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸೌದೆ ಹಾಗೂ ಕಟ್ಟಿಗೆಯ ದರದಲ್ಲಿ ಪ್ರತಿ ಕೆಜಿಗೆ 90 ರಿಂದ 100 ರೂಪಾಯಿಯಷ್ಟು ಏರಿಕೆಯಾಗಿದೆ.
ಯುದ್ಧ ಆರಂಭವಾಗುವ ಮೊದಲು ದಿನಕ್ಕೆ ಸರಾಸರಿ 1 ರಿಂದ 1.5 ಟನ್‌ನಷ್ಟು ಕಟ್ಟಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ 2 ರಿಂದ 3 ಟನ್‌ನಷ್ಟು ಸೌದೆ ಮಾರಾಟವಾಗುತ್ತಿದೆ. ಮೊದಲು ಪ್ರತಿ ಕ್ವಿಂಟಾಲ್‌ಗೆ 1000 ರೂಪಾಯಿ ಇದ್ದ ದರವು ಈಗ 1200 ರೂಪಾಯಿಗೆ ಏರಿಕೆಯಾಗಿದೆ. ಒಟ್ಟಿನಲ್ಲಿ ಯುದ್ಧದಿಂದಾಗಿ ಉಂಟಾಗಿರುವ ಎಲ್‌ಪಿಜಿ ತೀವ್ರ ಅಭಾವದಿಂದಾಗಿ, ಜನತೆ ಅನಿವಾರ್ಯವಾಗಿ ಮತ್ತೆ ಹಳೆಯ ಒಲೆ ಪದ್ಧತಿಗೆ ಮೊರೆ ಹೋಗುವಂತಾಗಿದೆ.
