ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾಜಿಗೆ ಅಗೌರವ ತೋರಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬೈಲಹೊಂಗಲದಲ್ಲಿರುವ ರಾಣಿ ಚೆನ್ನಮ್ಮಾಜಿಯ ಸಮಾಧಿ ಸ್ಥಳವನ್ನು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತುರ್ತಾಗಿ ಉದ್ಘಾಟಿಸಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಮಾಧಿ ಅಭಿವೃದ್ಧಿ ಹಾಗೂ ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಇದೇ ವೇಳೆ ರಾಣಿ ಚೆನ್ನಮ್ಮಾಜಿ ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು. ಕಳೆದ 23 ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಸ್ಥಳೀಯ ಶಾಸಕರು ಸ್ಪಂದಿಸಿಲ್ಲವೆಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಾತನಾಡಿ, ಚೆನ್ನಮ್ಮಾಜಿಯ ವಿಷಯದಲ್ಲಿ ಸರ್ಕಾರ ಮತ್ತು ಶಾಸಕರು ಗಂಭೀರತೆ ತೋರಬೇಕು ಎಂದು ಹಿತವಚನ ನೀಡಿದರು.

ನಿನ್ನೆ ಬೈಲಹೊಂಗಲ ಪಟ್ಟಣದಲ್ಲಿ ಬೈಕ್ ರ್ಯಾ ಲಿ, ಟ್ರ್ಯಾಕ್ಟರ್ ರ್ಯಾ ಲಿ ಮತ್ತು ಚಕ್ಕಡಿ ರ್ಯಾಕಲಿ ನಡೆಸುವ ಮೂಲಕ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಣಿ ಚೆನ್ನಮ್ಮಾಜಿ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ರಾಣಿ ಚೆನ್ನಮ್ಮಾಜಿಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಶಂಕರ ಮಾಡಲಗಿ ಅವರು, 23 ದಿನಗಳಿಂದ ಹೋರಾಟ ನಡೆದರೂ ಶಾಸಕರು ಜನರ ಅಹವಾಲು ಕೇಳಲು ಮುಂದಾಗಿಲ್ಲ, ನಮ್ಮ ಮೇಲೆ ಈಗಾಗಲೇ 68 ಕೇಸ್ಗಳನ್ನು ಹಾಕಲಾಗಿದ್ದು ಇನ್ನು ಎಷ್ಟು ಕೇಸ್ ಹಾಕಿದರೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದರು.
ಬಿಜೆಪಿ ಮುಖಂಡ ವಿ.ಐ. ಪಾಟೀಲ ಮಾತನಾಡಿ ಚೆನ್ನಮ್ಮಾಜಿಗೆ ಅವಮಾನ ಮಾಡಲಾಗಿದ್ದು, ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಗುಣಮಟ್ಟವಿಲ್ಲ ಎಂದು ದೂರಿದರು. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಟೀಕಿಸುತ್ತಾ, ರಾಣಿ ಚೆನ್ನಮ್ಮಾಜಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವುದು ಖಂಡನೀಯ ಮತ್ತು ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
