ಬೆಳಗಾವಿಯ ಸಂತ ಮೇಲಗೆ ಶಾಲೆಯ 1988-89ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಬರೋಬ್ಬರಿ 37 ವರ್ಷಗಳ ನಂತರ ಒಂದಾಗಿ ತಮ್ಮ ಶಾಲೆಯ ಋಣ ತೀರಿಸಿದ್ದಾರೆ. ಕೇವಲ ಸ್ನೇಹ ಸಮ್ಮಿಲನಕ್ಕೆ ಸೀಮಿತವಾಗದೆ, ಶ್ರಮದಾನದ ಮೂಲಕ ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ.


ಬೆಳಗಾವಿಯ ಸಂತ ಮೇಲಗೆ ಶಾಲೆಯ 1988-89ರ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಹಲವು ದಶಕಗಳ ನಂತರ ಭೇಟಿಯಾದ ಸಹಪಾಠಿಗಳು, ಶಾಲೆಯ ಕೊಠಡಿಯೊಂದನ್ನು ಸ್ವಂತ ಖರ್ಚು ಹಾಗೂ ಶ್ರಮದಾನದ ಮೂಲಕ ದುರಸ್ತಿಗೊಳಿಸಿ, ಸುಂದರವಾದ ಬಣ್ಣ ಬಳಿದು ಅದಕ್ಕೆ ‘ಗ್ರಂಥಾಲಯ’ದ ರೂಪ ನೀಡಿದ್ದಾರೆ. ಈ ನೂತನ ಗ್ರಂಥಾಲಯವನ್ನು ಹಳೆಯ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ ಗೀತಾ ವಿಷ್ಣು ಮಠಸ್ಥ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಧನಂಜಯ್ ಪಾಟೀಲ್ ಅವರು, ಹಳೆಯ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಸದಾ ಕಾರ್ಯಪ್ರವೃತ್ತರಾಗಿರಬೇಕು ಎಂದು ಕರೆ ನೀಡಿದರು. ಮತ್ತೊಬ್ಬ ಅತಿಥಿ ಸುರೇಶ್ ಪಾಟೀಲ್ ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ರೀತಿಯ ಕೀಳರಿಮೆ ಇಲ್ಲದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು. ಶಾಲೆಯ ಮುಖ್ಯಾಧ್ಯಕ್ಷರಾದ ಸುರೇಶ್ ಮಾದಾರ್ ಅವರು ವಿದ್ಯಾರ್ಥಿಗಳ ಈ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಾತೇರಿ ಪಾಟೀಲ್, ಸುಶಾಂತ್ ಪಾಟೀಲ್, ಶಿವಾನಂದ ಕರವಿನಕೊಪ್ಪ, ಚಂದಾ ಬಾವಕರ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಶ್ರಮಿಸಿದ್ದಾರೆ.
