ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮೊಸಳೆಗಳ ಪ್ರತ್ಯಕ್ಷವಾಗುವಿಕೆ ಜನರನ್ನು ಹೌಹಾರುವಂತೆ ಮಾಡಿದೆ. ರೈತನೊಬ್ಬ ತನ್ನ ಹೊಲದ ಬಾವಿಯಲ್ಲಿ ಎರಡು ಬೃಹತ್ ಮೊಸಳೆಗಳನ್ನು ಕಂಡು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ರೈತ ನಾಗಪ್ಪ ಸತ್ತಿಗೇರಿ ಎಂಬುವವರು ಇಂದು ಎಂದಿನಂತೆ ತಮ್ಮ ಹೊಲದ ಕೆಲಸಕ್ಕೆ ತೆರಳಿದ್ದಾಗ, ಅಲ್ಲಿನ ಬಾವಿಯಲ್ಲಿ ಎರಡು ಮೊಸಳೆಗಳು ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಈ ವಿಷಯವು ಗ್ರಾಮದಾದ್ಯಂತ ಹರಡಿದ್ದು, ಕುತೂಹಲ ಹಾಗೂ ಭಯದಿಂದ ಜನರು ಬಾವಿಯತ್ತ ಧಾವಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಸಿಬ್ಬಂದಿಗಳು ಮೊಸಳೆಗಳ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

