ಮಹಾತ್ಮಾ ಜ್ಯೋತಿಬಾ ಫುಲೆ ಅವರು ಮಹಾರಾಷ್ಟ್ರದ ಹೆಮ್ಮೆಯ ಸಮಾಜ ಸುಧಾರಕರು, ಚಿಂತಕರು ಹಾಗೂ ದಲಿತ ಮತ್ತು ಮಹಿಳಾ ಶಿಕ್ಷಣದ ಹರಿಕಾರರು. ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜದ ಸುಧಾರಣೆಗಾಗಿ ಹರಸಾಹಸ ಪಟ್ಟಿದ್ದಾರೆ ಎಂದು ಕಾಗವಾಡದ ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.


ಶನಿವಾರ ಸಂಜೆ ಕಾಗವಾಡದ ಮಾಳಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ 199ನೇ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಗವಾಡ ತಾಲೂಕು ಮಾಳಿ ಸಮಾಜದ ಅಧ್ಯಕ್ಷರಾದ ಅನಿಲ್ ಕೋರೆ ಅವರ ನೇತೃತ್ವದಲ್ಲಿ ಸಮಾಜದ ಎಲ್ಲ ಯುವಕರು ಮತ್ತು ಮಹಿಳೆಯರು ಒಂದುಗೂಡಿ ಮಹಾತ್ಮಾ ಜ್ಯೋತಿಬಾ ಫುಲೆ ಅವರ ಜಯಂತಿಯನ್ನು ಆಚರಿಸಿದರು.
ಕಾಗವಾಡದ ಗುರುದೇವ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ , ಜ್ಯೋತಿಬಾ ಫುಲೆ ಅವರು ಮಹಾರಾಷ್ಟ್ರದ ಹೆಮ್ಮೆಯ ಸಮಾಜ ಸುಧಾರಕರು, ಚಿಂತಕರು ಹಾಗೂ ದಲಿತ ಮತ್ತು ಮಹಿಳಾ ಶಿಕ್ಷಣದ ಹರಿಕಾರರು. ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜದ ಸುಧಾರಣೆಗಾಗಿ ಹರಸಾಹಸ ಪಟ್ಟಿದ್ದಾರೆ. “ಎಲ್ಲವೂ ಅನುಕೂಲವಿದ್ದಾಗ ಸೇವೆ ಮಾಡುವುದು ಸುಲಭ, ಆದರೆ ಎಲ್ಲೆಡೆ ವಿರೋಧವಿದ್ದರೂ ಅದನ್ನು ಎದುರಿಸಿ ಸಮಾಜಕ್ಕಾಗಿ ಹೋರಾಡಿದ ಅವರು ಮಹಾನ್ ನೇತಾರರು,” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕೋರೆ ಅವರು, “ಮಹಾತ್ಮಾ ಜ್ಯೋತಿಬಾ ಫುಲೆ ಅವರು ಮಾಳಿ ಸಮಾಜದ ಪಾಲಿಗೆ ದೇವರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ಅನುಭವಿಸುತ್ತಿದ್ದ ತೊಂದರೆಗಳನ್ನು ಎದುರಿಸಿ, ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದವರು ಅವರು,” ಎಂದು ಸ್ಮರಿಸಿದರು.
ಮುಂದುವರಿದು ಮಾತನಾಡುತ್ತಾ, “ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಕೆಲವರು ಸಮಾಜದ ಅಲ್ಪ ಶಿಕ್ಷಿತರಿಗೆ ಮೋಸ ಮಾಡುತ್ತಿರುವುದು ಕಂಡುಬರುತ್ತಿದೆ. ಇಂತಹ ಘಟನೆಗಳು ನಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿವೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಮಾಳಿ ಸಮಾಜ ಸಂಘಟನೆಯ ಕಾರ್ಯದರ್ಶಿ ಮಾರುತಿ ಕನಾಳ, ಪತ್ರಕರ್ತ ಲಕ್ಷ್ಮಣ್ ಸೂರ್ಯವಂಶಿ ಹಾಗೂ ಮಹಾರಾಷ್ಟ್ರದ ನಿರೂಪಕಿ ಶ್ರೇಯಾ ಶಿಂದೆ ಅವರು ಮಹಾತ್ಮಾ ಜ್ಯೋತಿಬಾ ಫುಲೆ ಅವರ ಕುರಿತು ಯುವಕರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಕಾಕಾಸಾಹೇಬ್ ಪಾಟೀಲ್ ಹಾಗೂ ಸಮಾಜ ಸೇವಕ ರಮೇಶ್ ಚೌಗೂಲೆ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರಾದ ಸಚಿನ್ ಕಿರೂರೆ, ಸಚಿನ್ ಮಾಳಿ, ಚೇತನ್ ಕೋರೆ, ಸಂತೋಷ ಮಾಳಿ, ವಿಲಾಸ್ ಮಾಳಿ, ನಕುಲ ಕೋರೆ, ಅಣ್ಣಾಸಾಹೇಬ್ ಕೋರೆ, ಶ್ರೀಮತಿ ಪ್ರಭಾವತಿ ಕೋರೆ, ಸುನಿತಾ ಕೋರೆ, ಪದ್ಮಾ ಕನಾಳ ಹಾಗೂ ಮೀನಾ ಮಾಳಿ ಅವರು ವಿಶೇಷವಾಗಿ ಶ್ರಮಿಸಿ ಸಮಾಜದ ಸಾಧಕರಿಗೆ ಮತ್ತು ವಿವಿಧ ಶಾಲೆಗಳಲ್ಲಿ ವಿಶೇಷ ಸಾಧನೆ ಮಾಡಿದ ಸುಮಾರು 70 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಅಭಿನಂದಿಸಿದರು.
ಮಹಾರಾಷ್ಟ್ರದ ನಿರೂಪಕಿ ಶ್ರೇಯಾ ಶಿಂದೆ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
