Bagalkot

ಯತ್ನಾಳ್ ನನ್ನೊಂದಿಗೆ ನಮಾಜ್ ಮಾಡಿದ್ದಾರೆ, ಟೋಪಿ ಧರಿಸಿದ್ದಾರೆ

Share

ಬಾಗಲಕೋಟೆ ಉಪಸಮರದ ಅಖಾಡದಲ್ಲಿ ಈಗ ವೈಯಕ್ತಿಕ ವಾಗ್ದಾಳಿ ತಾರಕಕ್ಕೇರಿದೆ. ರಾಜ್ಯ ಸರ್ಕಾರವನ್ನು ‘ಪಾಕಿಸ್ತಾನ ಸರ್ಕಾರ’ ಎಂದು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಎಂ.ಬಿ. ಪಾಟೀಲ್ ಖಡಕ್ ತಿರುಗೇಟು ನೀಡಿದ್ದಾರೆ. ಯತ್ನಾಳ್ ಜೆಡಿಎಸ್‌ನಲ್ಲಿದ್ದಾಗ ನನ್ನ ಜೊತೆ ನಮಾಜ್ ಮಾಡಿದ್ದಾರೆ, ಮುಸ್ಲಿಂ ಟೋಪಿ ಧರಿಸಿದ್ದಾರೆ’ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಏಪ್ರಿಲ್ 9 ರಂದು ನಡೆಯಲಿರುವ ಈ ಉಪಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದು ಎಂದರು. ಹೆಚ್.ವೈ. ಮೇಟಿಯವರ ಅಕಾಲಿಕ ನಿಧನದಿಂದ ಎದುರಾಗಿರುವ ಈ ಚುನಾವಣೆಯಲ್ಲಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಜನರ ಅನುಕಂಪ ಮತ್ತು ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ ಎಂದರು. ಅಲ್ಲದೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಷ್ಟೇ ಅಲ್ಲದೆ, ಹಸಿರು ಕ್ರಾಂತಿ, ಇಸ್ರೋ, ಬಿಇಎಲ್ ನಂತಹ ಸಂಸ್ಥೆಗಳನ್ನು ಕಟ್ಟಿ ಭಾರತವನ್ನು ಸ್ವಾವಲಂಬಿಯಾಗಿಸಿದ್ದು ಕಾಂಗ್ರೆಸ್ ಪಕ್ಷದ ದೊಡ್ಡ ಕೊಡುಗೆ ಎಂದು ನೆನಪಿಸಿದರು.

ಬಿಜೆಪಿಯಲ್ಲಿ ನೇತೃತ್ವವೇ ಇಲ್ಲ. ಅವರಲ್ಲಿ 20 ಬಾಗಿಲುಗಳಿವೆ ಎಂದ ಅವರು ಯತ್ನಾಳ್ ಅವರು ಸಿಎಂ ವಿರುದ್ಧ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದರು. ಕರ್ನಾಟಕ ಸರ್ಕಾರವನ್ನು ಪಾಕಿಸ್ತಾನ ಸರ್ಕಾರ ಎಂದಿರುವ ಯತ್ನಾಳ್ ಜೆಡಿಎಸ್’ನಲ್ಲಿದ್ದಾಗ ಮುಸ್ಲಿಂಮರ ಟೋಪಿ ಧರಿಸಿದ್ದಾರೆ. ನನ್ನೊಂದಿಗೆ ನಮಾಜ್ ಬಿದ್ದಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ್ದಾರೆ ಎಂದರು. ಬಿಜೆಪಿ ಈಗಷ್ಟೇ ಅಲ್ಲ. 2028ರ ಚುನಾವಣೆಯನ್ನು ಕೂಡ ಸೋಲಲಿದೆ ಎಂದರು.

ಇದೇ ವೇಳೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಾಟೀಲ್, “ಅಚ್ಚೇ ದಿನ್” ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗಿದೆ ಎಂದು ಕಿಡಿಕಾರಿದರು. 400 ರೂಪಾಯಿ ಇದ್ದ ಗ್ಯಾಸ್ ಬೆಲೆ 1000 ದಾಟಿದೆ, ಪೆಟ್ರೋಲ್ ಬೆಲೆ ನೂರರ ಗಡಿ ಮೀರಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ಇದ್ದ ಕೆಲಸಗಳನ್ನೂ ಕಿತ್ತುಕೊಂಡಿದ್ದಾರೆ. ನೋಟ್ ಬ್ಯಾನ್‌ನಿಂದ ಯುವಕರು ಬೀದಿಗೆ ಬರುವಂತಾಗಿದೆ. ರೈತರ ಸಾಲ ಮನ್ನಾ ಮಾಡದ ಬಿಜೆಪಿ ಸರ್ಕಾರ, ಕೇವಲ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಲು ಆಸಕ್ತಿ ತೋರುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ವಿಳಂಬ ಧೋರಣೆಯನ್ನು ಖಂಡಿಸಿದ ಸಚಿವರು, 2013 ರಲ್ಲೇ ಸ್ಪಷ್ಟೀಕರಣ ನೀಡಿದ್ದರೂ ಈವರೆಗೆ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ ಎಂದು ದೂರಿದರು. ಸಿದ್ದರಾಮಯ್ಯನವರು ತಮ್ಮನ್ನು “ಮುಂದಿನ ಸಿಎಂ” ಎಂದು ಕರೆದ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ನಾವೆಲ್ಲರೂ ಒಗ್ಗಟ್ಟಿನಿಂದ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿಯ ಆಡಳಿತ ವೈಫಲ್ಯ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ನಮಗೆ 70% ಮತ ತಂದುಕೊಡಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Tags:

error: Content is protected !!