ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿ ಬೆಳಗಾವಿಯ ರಸ್ತೆಗಳಲ್ಲಿ ಇಂದು ವಿಶೇಷ ಸಂಚಲನ ಕಂಡುಬಂದಿದೆ. ಸಮಾಜ ಸೇವೆಯೇ ಗುರಿಯಾಗಿಟ್ಟುಕೊಂಡು, ಜಿತೋ ಮಹಿಳಾ ಮತ್ತು ಯುವ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಕಾರ್ ರ್ಯಾ ಲಿ ಎಲ್ಲರ ಗಮನ ಸೆಳೆಯಿತು. ಅಲ್ಲದೇ ವಿಶ್ವ ದಾಖಲೆ ಬರೆಯಿತು.


ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಳಗಾವಿಯಲ್ಲಿ ನಡೆದ ‘ಡ್ರೈವ್ ವಿಥ್ ಪರ್ಪಸ್’ ರಾಷ್ಟ್ರೀಯ ಕಾರ್ ರ್ಯಾ್ಲಿ, ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಜಾಗೃತಿಯ ಸಂಕೇತವಾಗಿ ಮೂಡಿಬಂತು. ಸಿಪಿಇಡಿ ಮೈದಾನದಿಂದ ಆರಂಭಗೊಂಡ ಈ ರ್ಯಾಿಲಿಗೆ ಡಿಸಿಪಿ ನಾರಾಯಣ ಬರಮನಿ ಅವರು ಚಾಲನೆ ನೀಡಿದರು. ಕೆಂಪು ಬಣ್ಣದ ಉಡುಪಿನಲ್ಲಿ ಸಜ್ಜಾಗಿದ್ದ ನೂರಾರು ಮಹಿಳೆಯರು ಮತ್ತು ಯುವಕರು, ಕ್ಯಾನ್ಸರ್ ಮತ್ತು ಥಲಸ್ಸೇಮಿಯಾದಂತಹ ಗಂಭೀರ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಗೋಮಟೇಶ ವಿದ್ಯಾಪೀಠದಲ್ಲಿ ಅಂತ್ಯಗೊಂಡ ಈ ಕಾರ್ಯಕ್ರಮದಲ್ಲಿ, ಖ್ಯಾತ ಆಂಕಾಲಜಿಸ್ಟ್ ಡಾ. ಅಭಿನಂದನ್ ಹಂಜಿ ಅವರು ಆರೋಗ್ಯ ಮತ್ತು ಪೌಷ್ಟಿಕಾಂಶದ ಮಹತ್ವದ ಕುರಿತು ಮಾತನಾಡಿದರು.

ಈ ರ್ಯಾಕಲಿಯು ಕೇವಲ ಒಂದು ಸಂಚಾರವಾಗಿರದೆ, ಜೆಎಲ್‌ಡಬ್ಲ್ಯೂಅಪೆಕ್ಸ್ ತಂಡವು ದೇಶಾದ್ಯಂತ 3,000ಕ್ಕೂ ಹೆಚ್ಚು ಕಾರುಗಳ ಮೂಲಕ ಜಾಗೃತಿ ಮೂಡಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲೆ ನಿರ್ಮಿಸಿರುವುದರ ಮುಂದುವರಿದ ಭಾಗವಾಗಿತ್ತು. ಜಿತೋ ಬೆಳಗಾವಿ ಶಾಖೆಯ ಸಾರಿಕಾ ಗಾಡಿಯಾ, ಕೀರ್ತಿ ದೊಡ್ಡಣ್ಣವರ್, ಲೀನಾ ಶಾಹ್, ಮಯೂರಾ ಪಾಟೀಲ್, ಅರ್ನವ್ ಶಾಹ್, ವೈಭವ ಮೆಹ್ತಾ, ಅಭಯ್ ಆದಿಮಣಿ, ಹರ್ಷವರ್ಧನ್ ಇಂಚಲ್ ಮತ್ತು ಅಂಕಿತ್ ಸಂಚೇತಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಮಾಜದ ಸ್ವಾಸ್ಥ್ಯಕ್ಕಾಗಿ ಇಂತಹ ಸಕಾರಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿತೋ ಸಂಘಟನೆಯು ಮಹಿಳಾ ನಾಯಕತ್ವವನ್ನು ಎತ್ತಿಹಿಡಿದಿದೆ.


