ಜಗತ್ತಿನ ಪ್ರತಿ ಯಶಸ್ವಿ ಪುರುಷನ ಹಿಂದೆ ಹೆಣ್ಣಿನ ತ್ಯಾಗಮಯಿ ಪಾತ್ರ ಬಹಳ ದೊಡ್ಡದಿದೆ. ಸೂರ್ಯೋದಯಕ್ಕೂ ಮುನ್ನವೇ ಎದ್ದು ನಾರಿ ಶಕ್ತಿಯಾಗಿ ಮನೆ ಬೆಳಗುವ ಮಹಿಳೆಯ ಗೌರವಾರ್ಥವಾಗಿ ಪ್ರತಿದಿನವೂ ಮಹಿಳಾ ದಿನಾಚರಣೆಯೇ ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅಭಿಮತ ವ್ಯಕ್ತಪಡಿಸಿದ್ದಾರೆ.

ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶಿವು ಬಾಗವಾಡ್ಕರ್ ನೇತೃತ್ವದ ಸಮರ್ಥ್ ಆದರ್ಶ್ ಗಾರ್ಮೆಂಟ್ಸ್ ಅಸೋಸಿಯೇಷನ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯಿಲ್ಲದೆ ಈ ಜಗದ ನಿರ್ಮಿತಿ ಅಸಾಧ್ಯ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ಪ್ರತಿ ಹಂತದಲ್ಲೂ ತ್ಯಾಗಮಯಿ ಜೀವನ ನಡೆಸುವ ಮಹಿಳೆಯನ್ನು ಪೂಜಿಸುವ ಸಂಸ್ಕೃತಿ ನಮ್ಮ ಭಾರತೀಯ ಪರಂಪರೆಯಲ್ಲಿದೆ ಎಂದು ಬಣ್ಣಿಸಿದರು. ಪುರುಷನ ಯಶಸ್ಸಿಗೆ ಮಹಿಳೆಯೇ ಬೆನ್ನೆಲುಬಾಗಿದ್ದು, ಆಕೆಯ ಶ್ರಮದಿಂದಲೇ ಇಂದು ಸಮಾಜ ಸುಸ್ಥಿತಿಯಲ್ಲಿದೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರ ಧರ್ಮಪತ್ನಿ ರುಕ್ಮಿಣಿ ಹಲಗೇಕರ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಕೈಜೋಡಿಸಬೇಕು ಎಂದರು. ಸಮಾರಂಭದಲ್ಲಿ ವಿವಿಧ ತರಬೇತಿ ಪೂರ್ಣಗೊಳಿಸಿದ ಯುವತಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ ಮಹಿಳೆಯರಿಂದ ಆಕರ್ಷಕ ಸಾಂಸ್ಕೃತಿಕ ನೃತ್ಯಗಳು ಜರುಗಿದವು. ವೇದಿಕೆಯ ಮೇಲೆ ಪತ್ರಕರ್ತ ಕಾಶೀಮ್ ಹಟ್ಟಿಹೊಳಿ, ದೀಪಾ ಪಾಟೀಲ, ಡಾ. ಮಂಜುಳಾ ಸವದತ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಮಹಿಳೆಯರನ್ನು ಪ್ರೋತ್ಸಾಹಿಸಿದರು.
