ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ಬೆಳಗಾವಿಯ ‘ಶಕ್ತಿ ಸಾಮರ್ಥ್ಯ ಫೌಂಡೇಶನ್’ನ ಮಹಿಳೆಯರು ವಿಶಿಷ್ಟವಾದ ಸಮಾಜ ಸೇವೆಯನ್ನು ಮಾಡಿದ್ದಾರೆ. ಸದಾಶಿವನಗರದ ಗಣಾಚಾರಿ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ, ಮರೆಯಲಾಗದ ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.


ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕೇವಲ ಸಂಭ್ರಮಾಚರಣೆಗಷ್ಟೇ ಸೀಮಿತವಾಗದೆ, ಸಮಾಜಕ್ಕೆ ಏನಾದರೂ ಅರ್ಥಪೂರ್ಣ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಶಕ್ತಿ ಸಾಮರ್ಥ್ಯ ಫೌಂಡೇಶನ್ ತಂಡವು ಈ ಕಾರ್ಯವನ್ನು ಕೈಗೊಂಡಿದೆ. ಬೆಳಗಾವಿಯ ಸದಾಶಿವನಗರ 3ನೇ ಕ್ರಾಸ್‌ನಲ್ಲಿರುವ ಗಣಾಚಾರಿ ಸ್ಮಶಾನದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರವುಗೊಳಿಸಿ, ಕಸವನ್ನು ವಿಲೇವಾರಿ ಮಾಡುವ ಮೂಲಕ ಸ್ಮಶಾನಕ್ಕೆ ಹೊಸ ಕಾಯಕಲ್ಪ ನೀಡಿದ್ದಾರೆ.
ಈ ಕಾರ್ಯದಲ್ಲಿ ಫೌಂಡೇಶನ್‌ನ ಸಂಸ್ಥಾಪಕ ನಿರ್ದೇಶಕಿ ಲತಾ ಬಿ. ಅನಸ್ಕರ್, ನಿರ್ದೇಶಕಿಯರಾದ ಶ್ವೇತಾ ಮಹೇಂದ್ರಕರ್, ಸಗಾಯ್ ಮೇರಿ ಫ್ರಾನ್ಸಿಸ್ ಹಾಗೂ ತಂಡದ ಇತರ ಸದಸ್ಯರಾದ ಕವಿತಾ ಕೆ. ಮುದಲಿಯಾರ್, ಜಸಿಂತಾ ಮುದಲಿಯಾರ್, ನಿತಿನ್ ಕೆ. ಮುದಲಿಯಾರ್, ಸ್ವಸ್ತಿಕ್ ಮೇದಾರ್, ಹೃತಿಕ್ ಮೇದಾರ್, ಕಿರಣ್ ಕೊರ್ಡಾ ಮತ್ತು ಶೋಭಾ ಘೋಡ್ಕೆ ಅವರು ಶ್ರಮಿಸಿದ್ದಾರೆ. ಇವರಿಗೆ ವಾರ್ಡ್ ನಂ. 25ರ ಮೇಲ್ವಿಚಾರಕ ಸಂಜು ಮೋರೆ ಹಾಗೂ ಸಜ್ಜನ್ ಸುಲೇಭಾವಿ ಅವರು ತ್ಯಾಜ್ಯ ವಿಲೇವಾರಿಗೆ ಸಹಕಾರ ನೀಡಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
