ಬೆಳಗಾವಿಯ ಪ್ರತಿಷ್ಠಿತ ಸರ್ಕಾರಿ ಸರ್ದಾರ್ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಧಿವಕ್ತಾ ಪರಿಷತ್ ಕರ್ನಾಟಕ ಉತ್ತರ ಘಟಕದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಮಹಿಳಾ ಕಾನೂನುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲಾಯಿತು.

ಬೆಳಗಾವಿಯ ಸರ್ಕಾರಿ ಸರ್ದಾರ್ ಪದವಿ ಪೂರ್ವ ಮಹಿಳಾ ಕಾಲೇಜು ಮತ್ತು ಅಧಿವಕ್ತಾ ಪರಿಷತ್ ಕರ್ನಾಟಕ ಉತ್ತರ ಘಟಕದ ವತಿಯಿಂದ ಶನಿವಾರ ಕಾಲೇಜಿನ ಆವರಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಎನ್.ಆರ್. ಪಾಟೀಲ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಧಿವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ನ್ಯಾಯವಾದಿ ಸಚಿನ್ ಆರ್. ಶಿವಣ್ಣನವರ್, ಮಹಿಳೆಯರು ಸಮಾಜದಲ್ಲಿ ಧೈರ್ಯವಾಗಿ ಬದುಕಲು ಕಾನೂನುಗಳ ಅರಿವು ಬಹಳ ಮುಖ್ಯ. ಸಂವಿಧಾನವು ಮಹಿಳೆಯರಿಗೆ ನೀಡಿರುವ ಹಕ್ಕುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯೂ ತಿಳಿದಿರಬೇಕು ಎಂದು ಕರೆ ನೀಡಿದರು.

ಹೈಕೋರ್ಟ್ ನ್ಯಾಯವಾದಿ ಚಿತ್ರಾ ಗೌಂಡಲಕರ್ ಅವರು ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರೊಫೆಸರ್ ಜಯಶೀಲಾ, ಪ್ರೊ. ಚೌಗಲಾ, ಪ್ರೊ. ರೆಡ್ಡಿ ಹಾಗೂ ಅಧಿವಕ್ತಾ ಪರಿಷತ್ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸದಾಶಿವ ಹಿರೇಮಠ ಉಪಸ್ಥಿತರಿದ್ದರು. ಬೆಳಗಾವಿ ಘಟಕದ ನ್ಯಾಯವಾದಿಗಳಾದ ಜಯಶ್ರೀ ಮಂದ್ರೋಳಿ, ದೀಪಕ್ ನವರಕ್ಕಿ, ಚನ್ನವೀರೇಶ್ ಕಲ್ಮಠ್, ಪ್ರದೀಪ್ ಹುಕ್ಕೇರಿಮಠ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.
