ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ (JJM) ಯೋಜನೆ ಕಾಗದದಲ್ಲೇ ಸೀಮಿತವಾಗಿರುವಂತಾಗಿದೆ. ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪೈಪ್ಲೈನ್ ಮತ್ತು ನಲ್ಲಿಗಳ ವ್ಯವಸ್ಥೆ ಮಾಡಲಾಗಿದ್ದರೂ, ಕಳೆದ ಒಂದು ವರ್ಷದಿಂದ ಗ್ರಾಮಸ್ಥರಿಗೆ ನೀರಿನ ಸರಬರಾಜು ಸ್ಥಗಿತಗೊಂಡಿದೆ.
ಗ್ರಾಮದ ಪ್ರತಿಯೊಂದು ಮನೆಗೂ ನಲ್ಲಿಗಳನ್ನು ಅಳವಡಿಸಲಾಗಿದ್ದರೂ, ಅವುಗಳಿಂದ ಒಂದು ಹನಿಯೂ ನೀರು ಬರುತ್ತಿಲ್ಲ.ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ ದೂರದ ಮೂಲಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮಸ್ಥರು ಪ್ರತಿ ವರ್ಷವೂ ಗ್ರಾಮ ಪಂಚಾಯತಿಗೆ ನೀರಿನ ಕರವನ್ನು ಪಾವತಿಸುತ್ತಿದ್ದರೂ, ಮೂಲಭೂತ ಸೌಲಭ್ಯ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಡೋಂಟ್ ಕೇರ್ ಎನ್ನುವಂತೆ ಕಾಣುತ್ತಿದೆ ಅಧಿಕಾರಿಗಳ ನಡೆ ಇದರ ಜೊತೆಗೆ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ, ಸಾರ್ವಜನಿಕ ಸ್ಥಳಗಳಲ್ಲಿ ಕಸ-ನೀರು ನಿಂತು ದುರ್ವಾಸನೆ ಹರಡುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳ ಭೀತಿ ಹೆಚ್ಚುತ್ತಿದೆ.
ನಾಗನೂರು ಗ್ರಾಮಸ್ಥರು ತಕ್ಷಣವೇ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸರ್ಕಾರದ ಯೋಜನೆಗಳು ಜನರಿಗೆ ನಿಜವಾದ ಪ್ರಯೋಜನ ನೀಡಬೇಕು, ವ್ಯರ್ಥವಾಗಬಾರದು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
